ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ 2026ನೇ ಸಾಲಿನ ಮಂತ್ರಾಲಯ ಪರಿಮಳ ಪ್ರಶಸ್ತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಂದಿದೆ. ಸಮಾಜ ಸೇವೆ, ಕಲಾ, ಸಾಹಿತ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟಿನಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು “ಈ ಗೌರವಕ್ಕೆ ನನ್ನನ್ನು ಆಯ್ಕೆ ಮಾಡಿದ ಶ್ರೀ ಮಠಕ್ಕೆ ಮತ್ತು ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಮಹಾಸ್ವಾಮಿಗಳಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.”
ಇದನ್ನೂ ಓದಿ: ಕಂಬಳದ ಇತಿಹಾಸಕ್ಕೆ ಜೀವ ತುಂಬಿದ ವೀರೇಂದ್ರ ಹೆಗ್ಗಡೆ: ವೀರ ಕಂಬಳ ಚಿತ್ರ ತೆರೆಗೆ ಸಿದ್ಧ
ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಪ್ರತಿದಿನ ಸಾವಿರಾರು ಭಕ್ತರಿಗೆ ಅನ್ನದಾನ, ಉಚಿತ ವಸತಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೆರವು ಮತ್ತು ಗೋಶಾಲೆಗಳ ನಿರ್ವಹಣೆ ಮಾಡುತ್ತಿರುವ ಶ್ರೀ ಮಠದ ಸಾಮಾಜಿಕ ಸೇವೆ ಸ್ತುತ್ಯರ್ಹವಾದದ್ದು. ಕಲಿಯುಗ ಕಲ್ಪತರು, ಗುರುಸಾರ್ವಭೌಮರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಎಲ್ಲರ ಮೇಲಿರಲಿ ಹಾಗೂ ರಾಯರ ಕೃಪಾಕಟಾಕ್ಷದಿಂದ ರೈತರಿಗೆ, ಶ್ರಮಿಕರಿಗೆ ಹಾಗೂ ಜನತೆಗೆ ಶುಭವಾಗಲಿ. ಶ್ರೀ ಮಠಕ್ಕೆ ಹಾಗೂ ಪರಮ ಪೂಜ್ಯರಾದ ಶ್ರೀ ಸುಬುಧೇಂದ್ರ ಶ್ರೀಗಳಿಗೆ ನನ್ನ ಅನಂತ ಧನ್ಯವಾದಗಳು ಎಂದು ತಿಳಿಸಿದ್ದಾರೆ.
























