ಮೈಸೂರು: ಹುಣಸೂರು ತಾಲೂಕಿನ ರತ್ನಪುರಿ-ದಾಸನಪುರ ಮಧ್ಯೆ ಇರುವ ತೋಟದ ಮನೆಯಲ್ಲಿ ಭಾರೀ ಪ್ರಮಾಣದ ಸಿಂತೆಟಿಕ್ಸ್ ಡ್ರಗ್ಸ್ ಪ್ಯಾಕೆಟ್ ಮಾಡುತ್ತಿದ್ದ ವೇಳೆಯೇ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಹುಣಸೂರು ನಗರದ ರಹಮತ್ ಮೊಹಲ್ಲಾದ ಇರ್ಫಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಕೃತ್ಯ ನಡೆದಿದ್ದು, ಸುಮಾರು 25 ಕೆಜಿಗೂ ಹೆಚ್ಚು ಸಿಂತೆಟಿಕ್ಸ್ ಡ್ರಗ್ಸ್ ವಶಪಡೆದಿದ್ದಾರೆ.
ತೋಟದ ಮಾಲಿಕ ಹುಣಸೂರಿನ ಇರ್ಫಾನ್ ಮೈಸೂರಿನ ಇರ್ಫಾನ್ ಎಂಬಾತ ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆಂದು ತಿಳಿದು ಬಂದಿದ್ದು, ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಸಂಜೆ ದಿಢೀರ್ ಪೊಲೀಸರು ದಾಳಿ ನಡೆಸಿದ ವೇಳೆ ಸ್ಥಳದಿಂದ ಪರಾರಿಯಾಗಲೆತ್ನಿಸಿದವರನ್ನು ಸುಮಾರು 10 ಕಿಮೀವರೆಗೆ ಚೇಸ್ ಮಾಡಿ ನಗರಕ್ಕೆ ಸಮೀಪದ ಸಲೀಂ ಪ್ಯಾಲೆಸ್ ಬಳಿ ಬಂಧಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಡಿವೈಎಸ್‌ಪಿ ರವಿ ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಟದ ಮಾಲಿಕ ಇರ್ಫಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನಷ್ಟೆ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಡ್ಜ್‌ನಲ್ಲಿದ್ದವರು ಪರಾರಿ: ರತ್ನಪುರಿ ಲಾಡ್ಜ್ ಒಂದರಲ್ಲಿ ನಾಲ್ವರು ಕೆಲದಿನಗಳಿಂದ ಹೊರ ರಾಜ್ಯದಿಂದ ಬಂದು ರೂಮ್ ಮಾಡಿಕೊಂಡಿದ್ದವರು ಪೊಲೀಸರು ತೋಟಕ್ಕೆ ದಾಳಿ ನಡೆಸುತ್ತಿದ್ದಂತೆ ನಾಪತ್ತೆಯಾಗಿದ್ದಾರೆ.
ಹಿಂದೆ ಮೈಸೂರು ನಗರದಲ್ಲೂ ಡ್ರಗ್ಸ್ ಪತ್ತೆಯಾಗಿತ್ತು. ಇದೀಗ ಹಳ್ಳಿಗೂ ವ್ಯಾಪಿಸಿರುವುದು ಆತಂಕಕ್ಕೀಡು ಮಾಡಿದ್ದು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಪದೇ ಪದೆ ಡ್ರಗ್ಸ್ ಪತ್ತೆಯಾಗುತ್ತಿರುವುದು ಆತಂಕ ಉಂಟು ಮಾಡಿದೆ.























