ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಯ ೫೦:೫೦ ನಿವೇಶನ ಹಂಚಿಕೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಮೊದಲ ಹಂತದಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ನೋಟಿಸ್ ಪಡೆದವರು ಏಳು ದಿನಗಳ ಒಳಗೆ ಲೋಕಾಯುಕ್ತ ಕಚೇರಿಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 1,055 ನಿವೇಶನಗಳ ಹಂಚಿಕೆ ಕುರಿತು ತನಿಖೆ ನಡೆಯುತ್ತಿದ್ದು, ಈಗಾಗಲೇ 134 ಫಲಾನುಭವಿಗಳನ್ನು ಗುರುತಿಸಲಾಗಿದೆ.
ಇದನ್ನೂ ಓದಿ: Digital ಜಗತ್ತಿಗೆ ಹೊಸ ಕಾನೂನು: ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ
ಹಂಚಿಕೆ ಹಿನ್ನೆಲೆ: 50:50 ಯೋಜನೆಯಡಿ ಭೂಮಿಯನ್ನು ಮುಡಾಗೆ ಬಿಟ್ಟುಕೊಟ್ಟ ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ನಿವೇಶನಗಳ ಶೇ. 50ರಷ್ಟು ಪಾಲನ್ನು ಹಂಚಿಕೆ ಮಾಡಲಾಗುತ್ತದೆ. 2016ರಿಂದ 2024ರ ಅವಧಿಯಲ್ಲಿ ಈ ಯೋಜನೆಯಡಿ 1,055 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಹಲವು ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ, ಅಕ್ರಮ ಹಂಚಿಕೆ ಮತ್ತು ದುರುಪಯೋಗ ನಡೆದಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತರು ತನಿಖೆ ಆರಂಭಿಸಿದ್ದಾರೆ.
ಹೈಕೋರ್ಟ್ ಅನುಮತಿ: ಈ ಪ್ರಕರಣಗಳ ತನಿಖೆಗೆ ಲೋಕಾಯುಕ್ತರು ಕರ್ನಾಟಕ ಹೈಕೋರ್ಟ್‌ನ ಅನುಮತಿ ಪಡೆದುಕೊಂಡಿದ್ದಾರೆ. ಸುಮಾರು ೧೩೫ ಭೂಮಾಲೀಕರು ಮತ್ತು ಜಿಪಿಎ ಹೊಂದಿರುವವರು ಸುಮಾರು ೦೬೫ ನಿವೇಶನಗಳಿಂದ ಲಾಭ ಪಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಧಿಕಾರಿಗಳಿಗೂ ನೋಟಿಸ್: ಮುಡಾ ಪ್ರಸ್ತುತ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಹಾಗೂ ಮಾಜಿ ಆಯುಕ್ತ ಡಿ.ಬಿ. ನಟೇಶ್ ಸೇರಿದಂತೆ ಹಲವಾರು ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನೋಟಿಸ್‌ಗಳು ಹೊರಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟು: ವಿರೋಧ ಪಕ್ಷದ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಮಹಿಳಾ ಸಂಸದರ ಒತ್ತಾಯ
ಆತಂಕದಲ್ಲಿ ಫಲಾನುಭವಿಗಳು: ತನಿಖೆ ತೀವ್ರಗೊಂಡ ಹಿನ್ನೆಲೆಯಲ್ಲಿ ನಿವೇಶನ ಪಡೆದವರು ಹಾಗೂ ನಂತರ ಪ್ರೀಮಿಯಂ ದರಕ್ಕೆ ಮಾರಾಟ ಮಾಡಿದವರಲ್ಲಿ ಆತಂಕ ಉಂಟಾಗಿದೆ. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್ ಅವರು ಮಾತನಾಡಿ, “ನೋಟಿಸ್ ನೀಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಅಕ್ರಮಗಳು ಸಾಬೀತಾದಲ್ಲಿ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.
ಲಂಚ ಆರೋಪ: ಸ್ನೇಹಮಯಿ ಕೃಷ್ಣರಿಂದ ಗಂಭೀರ ಆರೋಪ ಬಂದಿದ್ದು, ಮುಡಾ ಹಗರಣದಲ್ಲಿ ಸತ್ಯವನ್ನು ಮರೆಮಾಚಲು ಹಿಂದಿನ ಆಯುಕ್ತರಿಂದ ಲೋಕಾಯುಕ್ತ ಅಧಿಕಾರಿಗಳಿಗೆ ₹4 ಕೋಟಿ 35 ಲಕ್ಷ ಲಂಚ ನೀಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ನಂದಿನಿ (ಬಮುಲ್) ಬ್ರಾಂಡ್ ಅಂಬಾಸಿಡರ್ ಆಗಿ ಸುಧಾ ರಾಣಿ ನೇಮಕ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಹಣದ ವ್ಯವಹಾರ ಕಾರಣವಾಗಿದೆ. ಈ ಕುರಿತು ನನ್ನ ಬಳಿ ಸ್ಪಷ್ಟ ದಾಖಲೆಗಳಿವೆ” ಎಂದು ಹೇಳಿದ್ದಾರೆ. ಅಲ್ಲದೆ, ದಾಖಲೆಗಳಲ್ಲಿ “ಆಅಒ” ಎಂಬ ಉಲ್ಲೇಖದ ಮುಂದೆ ₹12.50 ಕೋಟಿ ಹಣದ ದಾಖಲೆಯೂ ಇದೆ ಎಂದು ಅವರು ಆರೋಪಿಸಿದ್ದು, ಇದರ ಹಿನ್ನೆಲೆ ಕುರಿತು ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ನ್ಯಾಯಾಲಯಕ್ಕೆ ದೂರು: ಈ ಎಲ್ಲಾ ದಾಖಲೆಗಳನ್ನು ಆಧರಿಸಿ ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಪ್ರಕರಣವನ್ನು ನ್ಯಾಯಾಲಯ ಸ್ವೀಕರಿಸಿದೆ. ಈ ಕುರಿತು ಫೆಬ್ರವರಿ 20ರಂದು ವಿಚಾರಣೆ ನಡೆಯಲಿದೆ.























