ಸಂ.ಕ. ಸಮಾಚಾರ ಕಲಬುರಗಿ: ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭೀಕರ ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಅಪಾರ ಬೆಳೆ ಹಾಗೂ ಮೂಲಸೌಕರ್ಯ ಹಾನಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ತಂಡ ಮಂಗಳವಾರ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ, ಭೀಮನಾಳ ಮತ್ತು ಕಮಲಾಪುರ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿತು.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೈದರಾಬಾದ್‌ನ ಎಣ್ಣೆ ಬೀಜ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಪೊನ್ನುಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ನೇತೃತ್ವದ ತಂಡವು, ನೆರೆಯಿಂದ ಹಾನಿಗೊಳಗಾದ ಬೆಳೆಗಳು, ರಸ್ತೆ ಮತ್ತು ಸೇತುವೆಗಳ ಸ್ಥಿತಿಗತಿಗಳನ್ನು ವೀಕ್ಷಿಸಿ ರೈತರ ಅಳಲು ಆಲಿಸಿತು.
ಇದನ್ನೂ ಓದಿ: BRICS ಶೃಂಗಸಭೆಯ ಲೋಗೋ, ಥೀಮ್, ವೆಬ್‌ಸೈಟ್ ಬಿಡುಗಡೆ
ತೊಗರಿ ಬೆಳೆ ಸಂಪೂರ್ಣ ಹಾನಿ – ರೈತರ ಅಳಲು: ಡೊಂಗರಗಾಂವ ಗ್ರಾಮದ ಸರ್ವೇ ನಂ. 20/3ರಲ್ಲಿ ಸುಮಾರು 4.32 ಎಕರೆ ಪ್ರದೇಶದಲ್ಲಿ ತೊಗರಿ ಬೆಳೆದು ಸಂಪೂರ್ಣ ಹಾನಿಗೊಳಗಾದ ರೈತ ಅಭಿಷೇಕ್ ಅವರ ಹೊಲಕ್ಕೆ ತಂಡ ಭೇಟಿ ನೀಡಿತು. ಪ್ರತಿ ಎಕರೆಗೆ ಸುಮಾರು ₹30,000 ವೆಚ್ಚ ಮಾಡಿ ತೊಗರಿ ಬೆಳೆ ಬೆಳೆದಿದ್ದರೂ, ವಿಪರೀತ ಮಳೆಯಿಂದ ಎಲ್ಲವೂ ನಾಶವಾಗಿದೆ. ಬಿತ್ತಿದ 5–6 ಕೆ.ಜಿ. ಬಿತ್ತನೆ ಬಾರದ ಸ್ಥಿತಿಯಲ್ಲಿದೆ ಎಂದು ರೈತ ಅಭಿಷೇಕ್ ತಂಡದ ಮುಂದೆ ತನ್ನ ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿ ಮಾಹಿತಿ: ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಾದ್ಯಂತ ವಾಡಿಕೆಯಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು. ಜೊತೆಗೆ, ಶಾಲೆಗಳು, ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು, ರಸ್ತೆ ಮತ್ತು ಸೇತುವೆಗಳಂತಹ ಮೂಲಸೌಕರ್ಯಗಳಿಗೂ ಹಾನಿಯಾಗಿದೆ ಎಂದರು.
ಇದನ್ನೂ ಓದಿ: ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ
ಈಗಾಗಲೇ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಮುಖ್ಯಮಂತ್ರಿಗಳು ಈ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಿಸಿದ್ದು, ಅದರಂತೆ ಪರಿಹಾರ ಪಾವತಿಯೂ ನಡೆದಿದೆ ಎಂದು ವಿವರಿಸಿದರು.
ಶೇ.80ರಷ್ಟು ತೊಗರಿ ಬೆಳೆ ನಾಶ: ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಮಲಾಪುರ ತಾಲೂಕಿನಲ್ಲಿ 7,892 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ ಶೇ.80ರಷ್ಟು ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದಾಂಡೇಲಿ ಹಿರಿಯ ವಕೀಲ ಅಜಿತ್ ನಾಯ್ಕ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಮಣ್ಣಿನಲ್ಲಿ ಇನ್ನೂ ಹೆಚ್ಚಿನ ತೇವಾಂಶ ಇರುವುದರಿಂದ ಎರಡನೇ ಬೆಳೆ ಬೆಳೆಯಲು ಸಾಧ್ಯವಿಲ್ಲ. ಇದರಿಂದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.
ಕಮಲಾಪುರ ಗ್ರಾಮದಲ್ಲಿ ಮತ್ತಷ್ಟು ಹಾನಿ ವೀಕ್ಷಣೆ: ಕಮಲಾಪುರ ಗ್ರಾಮದ ಸರ್ವೇ ನಂ. 323ರಲ್ಲಿ ಮಹಾದೇವಪ್ಪ ಬಸವಣಪ್ಪ ಸವರಿಗೆ ಸೇರಿದ 6.19 ಎಕರೆ ತೊಗರಿ ಬೆಳೆ ಹಾನಿಯನ್ನೂ ತಂಡ ವೀಕ್ಷಿಸಿತು. ರೈತ ಪ್ರಶಾಂತ ಮಾತನಾಡಿ, ಮೂರಕ್ಕಿಂತ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಪ್ರತಿ ಎಕರೆಗೆ ₹25,000–30,000 ವೆಚ್ಚ ಮಾಡಿದ್ದರೂ ಮಳೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ ಎಂದು ನೋವು ವ್ಯಕ್ತಪಡಿಸಿದರು. ತದನಂತರ ಬೆಳೆದ ಕುಸಬಿ ಬೆಳೆಯ ಇಳುವರಿಯೂ ಅನುಮಾನದಲ್ಲಿದೆ ಎಂದರು.
ಇದನ್ನೂ ಓದಿ: ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ
ರಸ್ತೆ–ಸೇತುವೆ ಹಾನಿ ಪರಿಶೀಲನೆ: ಇದಕ್ಕೂ ಮೊದಲು, ತಂಡವು ಕಿಣ್ಣಿ ಸಡಕ್–ಡೋರ ಜಂಬಗಾ ನಡುವಿನ ಸೇತುವೆ, ಹಾಗೂ ಭೀಮನಾಳ ಗ್ರಾಮದಲ್ಲಿನ ರಸ್ತೆ ಹಾನಿಯನ್ನು ಸ್ಥಳದಲ್ಲಿಯೇ ಪರಿಶೀಲಿಸಿತು.
ಅಧಿಕಾರಿಗಳ ಉಪಸ್ಥಿತಿ: ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ತಹಶೀಲ್ದಾರ ಮೊಹಮ್ಮದ್ ಮೋಹಸೀನ್, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ಡಾ. ಅರುಣಕುಮಾರ ಮೂಲಿಮನಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.























