ಕೇಂದ್ರದ ಮೇಲೆ ನಂಬಿಕೆ ಇಲ್ಲ: ಬೇಡ್ತಿ–ವರದಾ ಯೋಜನೆ ಕುರಿತು ಸಿದ್ದರಾಮಯ್ಯ ಅಸಮಾಧಾನ
ಹಾವೇರಿ : ಸಮಾವೇಶವನ್ನು ಸಾವಿರ ದಿನಗಳ ಆಚರಣೆಯ ಮೈಲಿಗಲ್ಲಾಗಿ ಮಾತ್ರ ನೋಡಬಾರದು. ದೇಶದ ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುವ ಉದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಸರ್ಕಾರಿ ಮೆಡಿಕಲ್ ಕಾಲೇಜು ಆವರಣದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನೀಡಿದ ಭರವಸೆಗಳಂತೆ ನಡೆದುಕೊಳ್ಳುತ್ತಿದ್ದು, ಮುಂದೆಯೂ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಮುಂಬೈನಲ್ಲಿ ಮೆಟ್ರೋ ಕಾಮಗಾರಿ ದುರಂತ: ಸ್ಲ್ಯಾಬ್ ಕಂಬ ಕುಸಿದು ಒಬ್ಬ ಸಾವು, 3 ಜನರಿಗೆ ಗಾಯ
ಬಿಜೆಪಿ ವಿರುದ್ಧ ಕಿಡಿಕಾರಿಕೆ: ಸಮಾವೇಶಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿ ಪಕ್ಷವು ಹೊಟ್ಟೆಕಿಚ್ಚಿನಿಂದ ಟೀಕೆ ಮಾಡುತ್ತಿದೆ ಎಂದು ಆರೋಪಿಸಿದರು. ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಅವರು ಜನರಿಗಾಗಿ ಏನೂ ಮಾಡಿಲ್ಲ. 2018ರಲ್ಲಿ 600 ಭರವಸೆಗಳನ್ನು ನೀಡಿದ್ದರೂ ಶೇ.10ರಷ್ಟು ಕೂಡ ಈಡೇರಿಸಿಲ್ಲ ಎಂದರು. ನಾವು ನೀಡಿದ್ದ 592 ಭರವಸೆಗಳಲ್ಲಿ 243ನ್ನು ಕೇವಲ ಎರಡೂವರೆ ವರ್ಷಗಳಲ್ಲಿ ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನೂ ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅಧಿಕಾರ ಹಂಚಿಕೆ ಕುರಿತು ಸ್ಪಷ್ಟನೆ: ಅಧಿಕಾರ ಹಂಚಿಕೆ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು. ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದು ಪಕ್ಷದ ಸಂಪ್ರದಾಯ ಎಂದು ಹೇಳಿದರು. ಶಾಸಕರು ಟ್ವಿಟ್ ಮಾಡಿರುವ ವಿಚಾರದ ಕುರಿತು ಪ್ರಶ್ನಿಸಿದಾಗ, ವರಿಷ್ಠರು ಹೇಳಿದ್ದರೆ ಅದನ್ನು ಗೌರವಿಸಬೇಕೆಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಐತಿಹಾಸಿಕ ಕ್ಷಣ: ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಪ್ರಧಾನಿ ಮೋದಿ ವಿಮಾನ ಲ್ಯಾಂಡಿಂಗ್
ಶಿವರಾತ್ರಿ ನಂತರ ಬದಲಾವಣೆ ಕುರಿತು ಹೈಕಮಾಂಡ್ ಸೂಚನೆ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಯಿಂದ ಕರೆದರೆ ಹೋಗುತ್ತೇನೆ. ಈ ವಿಷಯದಲ್ಲಿ ಈಗಾಗಲೇ ಉತ್ತರ ನೀಡಿದ್ದೇನೆ, ಪದೇ ಪದೇ ಪ್ರಶ್ನಿಸಬೇಡಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ: ಬೇಡ್ತಿ–ವರದಾ ನದಿಗಳ ಜೋಡಣೆ ಯೋಜನೆ ಕುರಿತು ಉತ್ತರ ಕನ್ನಡ ಜನತೆ ವ್ಯಕ್ತಪಡಿಸಿರುವ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ನಮಗೆ ಭರವಸೆ ಇಲ್ಲ, ನಂಬಿಕೆ ಇಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ‘ಹಲ್ಕಾ ಡಾನ್ʼ
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಶೀಘ್ರ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿ ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಅದರ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.





















