ಸರ್ಕಾರಕ್ಕೆ ನಿಧಿ ನೀಡಿದ ಕುಟುಂಬಕ್ಕೆ ಪಂಚಾಯತನಿಂದ ನಿವೇಶನ

0
9

ಗದಗ: ಪ್ರಾಮಾಣಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಅಪರೂಪದ ಉದಾಹರಣೆಯಾಗಿ ಗುರುತಿಸಿಕೊಂಡಿರುವ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯತ್ ಮಹತ್ವದ ಗೌರವ ಸಲ್ಲಿಸಿದೆ. ಸರ್ಕಾರಕ್ಕೆ ಸಿಕ್ಕ ನಿಧಿಯನ್ನು ಯಾವುದೇ ಲಾಭದ ಆಸೆ ಇಲ್ಲದೆ ನೇರವಾಗಿ ಹಸ್ತಾಂತರಿಸಿದ್ದ ರಿತ್ತಿ ಕುಟುಂಬದ ಮಾನವೀಯ ನಡೆಗೆ ಸ್ಪಂದಿಸಿದ ಪಂಚಾಯತ್, 30×40 ಅಳತೆಯ ನಿವೇಶನವನ್ನು ನೀಡುವ ನಿರ್ಣಯವನ್ನು ಅಂಗೀಕರಿಸಿದೆ.

ಲಕ್ಕುಂಡಿಯ ಅನ್ನದಾನೇಶ್ವರ ಮಠದ ಸಭಾಭವನದಲ್ಲಿ ಇಂದು ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ರಿತ್ತಿ ಕುಟುಂಬದ ಸದಸ್ಯರನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ:  ವಿಜಯ್ ʼwhistleʼ ಗೆ ಆಯೋಗ ಅಸ್ತು

ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ, ಲಕ್ಕುಂಡಿ ಮಾರುತಿ ನಗರದಲ್ಲಿ ರಿತ್ತಿ ಕುಟುಂಬಕ್ಕೆ 30×40 ಸೈಟ್ ನೀಡುವ ನಿರ್ಣಯವನ್ನು ಏಕಮತದಿಂದ ಪಾಸ್ ಮಾಡಲಾಯಿತು.

ಮಾನವೀಯತೆಯ ಆಧಾರದ ಮೇಲೆ ವಿಶೇಷ ನಿರ್ಧಾರ: ಗ್ರಾಮ ಪಂಚಾಯತ್ ಈ ಪ್ರಕರಣವನ್ನು ಮಾನವೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿದೆ. ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ಪ್ರತಿನಿಧಿಗಳು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  ಕಮಲ್ ಹಾಸನ್‌ MNM ‘ಬ್ಯಾಟರಿ’ಗೆ ಆಯೋಗ ಹಸಿರು ನಿಶಾನೆ

ಇದಲ್ಲದೆ, ಮುಂದಿನ ದಿನಗಳಲ್ಲಿ ಸಚಿವರು ಹಾಗೂ ಶಾಸಕರ ಅನುದಾನಗಳ ಮೂಲಕ ರಿತ್ತಿ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಲಾಗಿದೆ. ಇದರಿಂದ ಕುಟುಂಬಕ್ಕೆ ಶಾಶ್ವತ ವಾಸಸ್ಥಾನ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.

ಶಿಕ್ಷಣ ಮತ್ತು ಉದ್ಯೋಗ ಭರವಸೆ: ರಿತ್ತಿ ಕುಟುಂಬದ ಭವಿಷ್ಯಕ್ಕೂ ಗ್ರಾಮ ಪಂಚಾಯತ್ ಭರವಸೆ ನೀಡಿದೆ. ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಜ್ವಲ್ ಅವರ ತಾಯಿ ಗಂಗಮ್ಮ ಅವರಿಗೆ ಉದ್ಯೋಗ ಒದಗಿಸುವುದಾಗಿ ಪಂಚಾಯತ್ ಭರವಸೆ ನೀಡಿದೆ.

ಇದನ್ನೂ ಓದಿ:  ಹಂಸಲೇಖ-ಎಸ್.ಮಹೇಂದರ್ ಜೋಡಿಯ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್

ಈ ನಿರ್ಧಾರವು ಪ್ರಾಮಾಣಿಕತೆಯನ್ನು ಗೌರವಿಸುವ ಸಮಾಜದ ಮೌಲ್ಯಗಳನ್ನು ಪ್ರತಿಬಿಂಬಿಸುವುದರ ಜೊತೆಗೆ, ಸಾರ್ವಜನಿಕ ಜೀವನದಲ್ಲಿ ನೈತಿಕತೆಯ ಮಹತ್ವವನ್ನು ಮತ್ತೊಮ್ಮೆ ಸ್ಮರಿಸಿದೆ. ರಿತ್ತಿ ಕುಟುಂಬದ ನಡೆ ಮತ್ತು ಪಂಚಾಯತ್‌ ಕೈಗೊಂಡ ತೀರ್ಮಾನವು ಇತರರಿಗೆ ಮಾದರಿಯಾಗಲಿದೆ ಎಂಬ ಅಭಿಪ್ರಾಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

Previous articleಕಮಲ್ ಹಾಸನ್‌ MNM ‘ಬ್ಯಾಟರಿ’ಗೆ ಆಯೋಗ ಹಸಿರು ನಿಶಾನೆ