ಧಾರವಾಡ: ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಕೊಲೆ ಪ್ರಕರಣವನ್ನು 12 ಗಂಟೆಗಲ್ಲಿಯೇ ಗ್ರಾಮೀಣ ಪೊಲೀಸರು ಭೇದಿಸಿದ್ದು, ಆಕೆಯೊಂದಿಗೆ ಹಸೆಮಣೆ ಏರಬೇಕಾದವನೇ ಕೊಲೆ ಮಾಡಿರುವ ಭೀಕರ ಸತ್ಯ ಹೊರಬಿದ್ದಿದೆ.
21 ವರ್ಷದ ವಿದ್ಯಾರ್ಥಿನಿ ಝಾಕಿಯಾ ಮುಲ್ಲಾಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಸಾಬೀರ್ ಮುಲ್ಲಾ ಆಕೆಯನ್ನು ಕೊಲೆಗೈದು ನಂತರ ವಿನಯ ಡೈರಿ ಹತ್ತಿರದ ನಿರ್ಜನ ಪ್ರದೇಶದಲ್ಲಿ ಶವವನ್ನು ಮತ್ತು ಆಕೆಯ ಮೊಬೈಲ್ ಎಸೆದು ಹೋಗಿದ್ದನು. ಇತ್ತ ಪಾಲಕರು ಮಗಳು ಕಾಣೆಯಾಗಿದ್ದಾಳೆ ಎಂದು ಠಾಣೆಗೆ ಆಗಮಿಸಿದಾಗ ಪುತ್ರಿಯ ಮೊಬೈಲ್ ನೆಟ್‌ವರ್ಕ್ ಆಧಾರದ ಮೇಲೆ ತಪಾಸಣೆ ಮಾಡಿದಾಗ ಆಕೆಯ ಶವ ದೊರೆತಿತ್ತು. ಈ ಕುರಿತು ವಿಚಾರಣೆ ನಡೆಸಿದಾಗ ಸಾಬೀರ್ ಮುಲ್ಲಾನೆ ಆಕೆಯನ್ನು ಕೊಲೆ ಮಾಡಿದ್ದು ಎಂಬುದು ಬಯಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಲಕ್ಕುಂಡಿ ಉತ್ಖನನದಲ್ಲಿ ಲೋಹದ ಹಣತೆ, ಎಲುಬು ಪತ್ತೆ
ಸಾಬೀರನ ತಂದೆ ಮತ್ತು ಕೊಲೆಯಾದ ಝಾಕಿಯಾ ತಂದೆ ಇಬ್ಬರೂ ಸ್ನೇಹಿತರು. ತಮ್ಮಿಬ್ಬರ ಮಕ್ಕಳ ಮದುವೆ ಮಾಡಿದರೆ ಮುಂದೆ ಅವರು ಖುಷಿಯಿಂದ ಜೀವನ ನಡೆಸುತ್ತಾರೆ ಎಂದು ಕನಸು ಕಟ್ಟಿಕೊಂಡು ವಿವಾಹವನ್ನು ನಿಶ್ಚಯಿಸಿದ್ದರು. ಆದರೆ, ಸಂಶಯ ಎಂಬ ಪಿಶಾಚಿ ಇಬ್ಬರ ಮಧ್ಯದ ವಿಶ್ವಾಸವನ್ನು ಹಾಳು ಮಾಡಿ ಕೊಲೆಯಲ್ಲಿ ಅಂತ್ಯಗೊಳಿಸಿದೆ.





















