Home Advertisement
Home ನಮ್ಮ ಜಿಲ್ಲೆ ಧಾರವಾಡ ಸುಟ್ಟ ಕರಕಲಾದ ಕಾರಿನಲ್ಲಿ ಮಾಜಿ ಶಾಸಕನ ಪುತ್ರನ ಶವ ಪತ್ತೆ

ಸುಟ್ಟ ಕರಕಲಾದ ಕಾರಿನಲ್ಲಿ ಮಾಜಿ ಶಾಸಕನ ಪುತ್ರನ ಶವ ಪತ್ತೆ

0
144

ಧಾರವಾಡ: ಜಿಲ್ಲೆಯ ರಾಮಾಪುರ ಗ್ರಾಮದ ರೈಲ್ವೆ ಹಳಿ ಸಮೀಪ ಇಂದು ಭೀಕರ ಹಾಗೂ ರಹಸ್ಯಮಯ ಘಟನೆ ಬೆಳಕಿಗೆ ಬಂದಿದೆ. ಕಾರಿನೊಳಗೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಪ್ರಕರಣವಾಗಿರಬಹುದೆಂಬ ಶಂಕೆ ಗಟ್ಟಿಯಾಗುತ್ತಿದೆ.

ಮೃತ ವ್ಯಕ್ತಿಯನ್ನು ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಎಂದು ಶಂಕಿಸಲಾಗಿದೆ. ರಾಜು ಅವರು ನಿನ್ನೆ (ಮಾ.23)ರಿಂದಲೇ ನಾಪತ್ತೆಯಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಘಟನೆ ಹೇಗೆ ಬೆಳಕಿಗೆ ಬಂತು? : ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ಸಮೀಪವಿರುವ ರೈಲ್ವೆ ಟ್ರ್ಯಾಕ್ ಪಕ್ಕದ ದಟ್ಟ ಅರಣ್ಯ ಹಾಗೂ ನಿರ್ಜನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಕಾರೊಂದು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನೊಳಗೆ ಸುಟ್ಟು ಕರಕಲಾದ ಶವ ಪತ್ತೆ ಮಾಡಿದ್ದಾರೆ. ಕಾರು ಸಂಪೂರ್ಣ ಹಾನಿಗೊಳಗಾಗಿದೆ. ಶವದ ಗುರುತು ಪತ್ತೆ ಮಾಡಲು ಪ್ರಯತ್ನ ಆರಂಭಿಸಿದ್ದಾರೆ

ಕೊಲೆ ಮಾಡಿ ಸುಟ್ಟ ಶಂಕೆ: ಪ್ರಾಥಮಿಕ ತನಿಖೆ ಪ್ರಕಾರ ಬೇರೆಡೆ ಹತ್ಯೆ ನಡೆಸಿ ಶವವನ್ನು ಕಾರಿನಲ್ಲಿ ಇಟ್ಟು ತಂದಿರುವ ಸಾಧ್ಯತೆ ಇದ್ದು, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತವಾಗಿದೆ. ಸಾಕ್ಷ್ಯ ನಾಶ ಮಾಡಲು ಯತ್ನ ನಡೆದಿರುವ ಸೂಚನೆ ಇರುವುದರಿಂದ ಇವುಗಳಿಂದ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದಿದೆ.

ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಗುಂಜನ್‌ಆರ್ಯ (ಎಸ್‌ಪಿ) ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ (FSL) ಮತ್ತು ಶ್ವಾನದಳವನ್ನು ಕರೆಯಿಸಿಕೊಳ್ಳಲಾಗಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.