ಹುಬ್ಬಳ್ಳಿ: ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ. ಒಂದು ವೇಳೆ ನವೆಂಬರ್‌ನಲ್ಲಿ ಕ್ರಾಂತಿಯಾಗಿ ಡಿಕೆಶಿ ಮುಖ್ಯಮಂತ್ರಿಯಾದರೆ ರಾಜ್ಯ ಸರ್ಕಾರ ಪತನವಾಗುವುದರಲ್ಲಿ ಸಂದೇಹವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿಯ ಬಗ್ಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರೇ ಮಾತನಾಡುತ್ತಿದ್ದಾರೆ. ಡಿಕೆಶಿ ಬೆಂಬಲಿಗರು ನವೆಂಬರ್‌ವರೆಗೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದರೆ, ಸಿದ್ದರಾಮಯ್ಯ ಬೆಂಬಲಿಗರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ನವೆಂಬರ್ ಕ್ರಾಂತಿಯ ಬಗ್ಗೆ ಇಬ್ಬರು ನಾಯಕರೂ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಇರ್ತಾರೆ ಎಂದು ಡಿಕೆಶಿ ಬಹಿರಂಗವಾಗಿ ಹೇಳಲಿ ಅಥವಾ ಇಬ್ಬರು ಸೇರಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ ಅವರು, ನವೆಂಬರ್‌ನಲ್ಲಿ ಕ್ರಾಂತಿಯಾಗುತ್ತಾ ಅಥವಾ ಬ್ರಾಂಥಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.
ರಾಜಣ್ಣ ನಿವಾಸದಲ್ಲಿನ ಶುಕ್ರವಾರ ಏರ್ಪಾಡಾಗಿದ್ದ ಔತಣಕೂಟ ರಾಜಕಾರಣದ ಹಿನ್ನೆಲೆಯಲ್ಲಿ ರದ್ದಾಗಿದೆ. ಇತ್ತ ಕಬ್ಬಿನ ದರ ನಿರ್ಧಾರದ ಸಂಬಂಧ ರೈತರ ಸಭೆ, ಅತ್ತ ಶುಗರ್ ಫ್ಯಾಕ್ಟರಿ ಮಾಲೀಕರ ಸಭೆ, ಮತ್ತೊಂದೆಡೆ ರಾಜಣ್ಣ ನಿವಾಸದಲ್ಲಿ ಔತಣಕೂಟ. ಎಲ್ಲವನ್ನೂ ಒಟ್ಟಿಗೇ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಶೆಟ್ಟರ, ರಾಜ್ಯದ ಮುಖ್ಯಮಂತ್ರಿಯಾಗಿ ಸಭೆಗಳ ಮೇಲೆ ಸಭೆ ಇರುವುದು ತಿಳಿದೂ ಔತಣಕೂಟವನ್ನು ಮುಂದೂಡುವಂತೆ ಸಲಹೆ ನೀಡಬಹುದಿತ್ತು ಎಂದು ಕಿಡಿಕಾರಿದರು.
