Home ನಮ್ಮ ಜಿಲ್ಲೆ ಧಾರವಾಡ ಬಡವರ ಕನಸು ನನಸಾಗಿಸುವ ಗುರಿ: ಜಮೀರ್ ಅಹ್ಮದ್

ಬಡವರ ಕನಸು ನನಸಾಗಿಸುವ ಗುರಿ: ಜಮೀರ್ ಅಹ್ಮದ್

0
1

ಹುಬ್ಬಳ್ಳಿ: ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 36,789 ಮನೆಗಳನ್ನು ವಿತರಿಸಲಾಗಿದೆ. ಎರಡನೇ ಹಂತದಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಮೂರನೇ ಹಂತದಲ್ಲಿ ಸುಮಾರು 30 ಸಾವಿರ ಮನೆಗಳನ್ನು ಹಂಚಿಕೆ ಮಾಡುವ ಗುರಿ ಇದ್ದು, ರಾಜ್ಯದಲ್ಲಿ ವಸತಿ ಕ್ರಾಂತಿ ಆಗಲಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಂಯುಕ್ತ ಕರ್ನಾಟಕ ಕಚೇರಿಗೆ ಬುಧವಾರ ಭೇಟಿ ನೀಡಿದ ವೇಳೆ ವಸತಿ ಯೋಜನೆಗಳ ಬಗ್ಗೆ ಅವರು ಮಾತನಾಡಿ, ಜ. 24ರಂದು 42 ಸಾವಿರ ಮನೆಗಳನ್ನು ಏಕಕಾಲಕ್ಕೆ ರಾಜ್ಯವ್ಯಾಪಿ ಇರುವ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ನಡೆಯುವ ಪ್ರಧಾನ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಮನೆ ಹಂಚಿಕೆ ಮಾಡಲಿದ್ದಾರೆ. ಬಳಿಕ ಏಕಕಾಲಕ್ಕೆ ಆಯಾ ಜಿಲ್ಲೆಯ ಶಾಸಕರು, ಸಚಿವರು ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ವಿವರಿಸಿದರು.

ಮೂರನೇ ಹಂತದ ಮನೆಗಳನ್ನು ಏಪ್ರಿಲ್, ಮೇ ತಿಂಗಳಲ್ಲಿ ವಿತರಿಸಲಾಗುವುದು. ಈಗ ನೀಡುತ್ತಿರುವ ಮನೆಗಳ ಪೈಕಿ ಹುಬ್ಬಳ್ಳಿಯಲ್ಲಿ 1,008 ಸೇರಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,767 ಮನೆ ಹಂಚಿಕೆ ಮಾಡಲಾಗುತ್ತಿದೆ. ರಾಜ್ಯ ವಸತಿ ಯೋಜನೆಯಡಿ ಒಟ್ಟು 1,80,253 ಮನೆಗಳ ನಿರ್ಮಾಣ ಆಗುತ್ತಿದೆ. ರಾಜ್ಯ ಸರ್ಕಾರ ತಲಾ 4 ಲಕ್ಷ ರೂ. ಕೊಡುತ್ತಿದ್ದು, ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಸಿಗಲಿದೆ. ಇದರಿಂದ ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಪಾವತಿಸಿದರೆ ಸ್ವತಂತ್ರ ಸೂರು ಹೊಂದಬಹುದು ಎಂದರು.

ವಸತಿ ಇಲಾಖೆಯಿಂದ ರಾಜೀವ್ ಗಾಂಧಿ ಆಶ್ರಯ ಯೋಜನೆಯಲ್ಲಿ ಒಟ್ಟು 47 ಸಾವಿರ ಮನೆಗಳನ್ನು ವಿತರಿಸಲಾಗುವುದು. ಇದರ ಜೊತೆಗೆ ಬೆಂಗಳೂರಿನಲ್ಲಿ 1 ಲಕ್ಷ ಹೌಸಿಂಗ್ ಸ್ಕೀಂ ಮಾಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಆಶ್ರಯ ಯೋಜನೆಯಡಿ 7,800 ಮನೆ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ನಿಗಾ ವಹಿಸಲು ಸಲಹೆ: ವಸತಿ ಯೋಜನೆಯಡಿ ರಾಜ್ಯದಲ್ಲಿ ಸಾವಿರಾರು ಮನೆಗಳು ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ಅವುಗಳನ್ನು ಹಂಚಿಕೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಮನೆ ನಿರ್ಮಿಸಿಕೊಟ್ಟು ಒಳ್ಳೆಯ ಕೆಲಸ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ಆ ವಸತಿ ಸಮುಚ್ಚಯ ನಿರ್ವಹಣೆಗೂ ಸೂಕ್ತ ಕ್ರಮವಹಿಸಬೇಕು. ಇದರಿಂದ ನೀವು ಬಡವರಿಗೆ, ವಸತಿರಹಿತರಿಗೆ, ಅಸಹಾಯಕರಿಗೆ ಮನೆ ಕಟ್ಟಿಕೊಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಅವರ ಜೀವನ ನಡೆಸುವ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುತ್ತದೆ ಎಂದು ಲೋಕ ಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿ ಕೇಶವ ದೇಸಾಯಿ ಸಲಹೆ ನೀಡಿದರು. ಸಲಹೆಯನ್ನು ಸ್ವಾಗತಿಸಿದ ಸಚಿವ ಜಮೀರ್ ಅವರು, ಬಡವರಿಗೆ ಹೊರೆ ಆಗದಂತೆ ಪ್ರತಿ ತಿಂಗಳಿಗೆ 100 ರೂ. ನಿರ್ವಹಣಾ ವೆಚ್ಚ ಸಂಗ್ರಹಿಸುವ ಚಿಂತನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.