ದಾವಣಗೆರೆ: ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಉಸ್ತುವಾರಿ ಸಚಿವರು ಹಾಗೂ ಸಂಸದರ ಆಗಮನಕ್ಕಾಗಿ ಗಂಟೆಗಟ್ಟಲೆ ವಿಳಂಬವಾಗುತ್ತಿರುವುದನ್ನು ಹರಿಹರ ಶಾಸಕ ಬಿ.ಪಿ. ಹರೀಶ್ ತೀವ್ರವಾಗಿ ಖಂಡಿಸಿದ್ದಾರೆ. ಜಿಲ್ಲಾಡಳಿತವು ಕೇವಲ ಒಂದು ಮನೆತನದ ಸೇವೆ ಮಾಡುವಲ್ಲಿ ನಿರತವಾಗಿದೆ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು, ಜಿಲ್ಲೆಯಲ್ಲಿ ಸರ್ಕಾರದಿಂದ ಆಯೋಜನೆಯಾಗುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಬಂದು ಕಾದು ಸುಸ್ತಾಗುತ್ತಿದ್ದಾರೆ. ಸಚಿವರು ಅಥವಾ ಸಂಸದರು ಬರುವವರೆಗೂ ಕಾರ್ಯಕ್ರಮ ಆರಂಭಿಸದ ಜಿಲ್ಲಾಡಳಿತದ ಧೋರಣೆ ಸರಿಯಲ್ಲ. ಕನಿಷ್ಠ ಅರ್ಧ ಗಂಟೆ ವಿಳಂಬವಾದರೆ ಸಹಿಸಿಕೊಳ್ಳಬಹುದು, ಆದರೆ ಗಂಟೆಗಟ್ಟಲೆ ಕಾಯಿಸುವುದು ಜನಸಾಮಾನ್ಯರಿಗೆ ಮಾಡುವ ಅಪಮಾನ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಕನಿಷ್ಠ ಜವಾಬ್ದಾರಿಯಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಮುಧೋಳಕ್ಕೆ, ಚೈನಾ, ಜರ್ಮನಿಗೆ ಹೋಗಬೇಕು, ಟಾಟಾ, ಬಿರ್ಲಾ ಸಮಕ್ಕೆ ಬೆಳಿಬೇಕು ಹಾಗಾಗಿ ಅವರನ್ನು ಅರ್ಧ ಗಂಟೆ ಕಾಯುವುದರಲ್ಲಿ ಅರ್ಥವಿದೆ ಎಂದು ಪರೋಕ್ಷವಾಗಿ ಕುಟುಕಿದ ಹರೀಶ್, ಸಚಿವರು ದೊಡ್ಡ ಮಟ್ಟದ ವ್ಯಕ್ತಿಗಳಾಗಿದ್ದು ಅವರನ್ನು ಕಾಯುವುದರಲ್ಲಿ ಒಂದು ಅರ್ಥವಿದೆ. ಆದರೆ ಸಂಸದರಿಗಾಗಿ ಇಷ್ಟೊಂದು ಸಮಯ ವ್ಯಯ ಮಾಡುವ ಅಗತ್ಯವೇನಿದೆ ಎಂದು ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅನ್ಯಾಯಗಳ ಕುರಿತು ನಾನು ಪ್ರಶ್ನೆ ಮಾಡುತ್ತೇನೆ ಎಂಬ ಭಯದಿಂದ ಜಿಲ್ಲಾಧಿಕಾರಿಗಳು ನನ್ನ ಮೊಬೈಲ್ ಸಂಖ್ಯೆಯನ್ನು ಕಪ್ಪುಪಟ್ಟಿಗೆ (ಬ್ಲಾಕ್ ಲಿಸ್ಟ್) ಹಾಕಿಕೊಂಡಿದ್ದಾರೆ ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದಾರೆ.
ಯಾವುದೇ ಚುನಾಯಿತ ಪ್ರತಿನಿಧಿಗಳು ಕರೆ ಮಾಡಿದರೆ ಅದನ್ನು ಸ್ವೀಕರಿಸಬೇಕೆಂದು ಬಸವರಾಜ ಹೊರಟ್ಟಿ ಅವರು ಸೂಚನೆ ನೀಡಿದ್ದರೂ, ಜಿಲ್ಲಾಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಜಿಲ್ಲಾಡಳಿತವು ಒಂದು ಕುಟುಂಬದ ಗುಲಾಮಗಿರಿಯನ್ನು ಬಿಟ್ಟು, ಕೂಡಲೇ ನನ್ನ ಸಂಖ್ಯೆಯನ್ನು ಕಪ್ಪುಪಟ್ಟಿಯಿಂದ ತೆರವುಗೊಳಿಸಬೇಕು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನೀಡುವ ಸಲಹೆಗಳನ್ನು ಆಲಿಸಬೇಕು ಎಂದು ಬಿ.ಪಿ. ಹರೀಶ್ ಎಚ್ಚರಿಸಿದ್ದಾರೆ.























