Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಮಂಗಳೂರು ಬಂದರಿಗೆ ಬಂದ ಐಷಾರಾಮಿ ಕ್ರೂಸ್ ಹಡಗು

ಮಂಗಳೂರು ಬಂದರಿಗೆ ಬಂದ ಐಷಾರಾಮಿ ಕ್ರೂಸ್ ಹಡಗು

0
175

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರ (NMPA)ಗೆ ಶನಿವಾರ ಐಷಾರಾಮಿ ಕ್ರೂಸ್ ಹಡಗು ‘ಸೆವನ್ ಸೀಸ್ ಮರಿನರ್’ (Seven Seas Mariner) ಅನ್ನು ಭರ್ಜರಿಯಾಗಿ ಸ್ವಾಗತಿಸಿದ್ದು, ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಬಹಮಾಸ್ ಧ್ವಜ ಹೊಂದಿರುವ ಈ ಹಡಗು ಕೊಚ್ಚಿಯಿಂದ ಆಗಮಿಸಿ ಮಂಗಳೂರಿನ ಬರ್ಥ್ ನಂ.4ರಲ್ಲಿ ನಿಲುಗಡೆಗೊಂಡಿತು. ಹಡಗಿನಲ್ಲಿ ಒಟ್ಟು 607 ಪ್ರಯಾಣಿಕರು ಹಾಗೂ 460 ಸಿಬ್ಬಂದಿ ಇದ್ದರು. ಬಳಿಕ ಹಡಗು ತನ್ನ ಮುಂದಿನ ಗಮ್ಯಸ್ಥಾನವಾದ ಮರ್ಮುಗೋವ್ ಕಡೆಗೆ ಪ್ರಯಾಣ ಮುಂದುವರಿಸಲಿದೆ.

ಪ್ರವಾಸಿಗರಿಗೆ ವಿಶೇಷ ಅನುಭವ : ಪ್ರಯಾಣಿಕರ ಸುಗಮ ನಿರ್ವಹಣೆಗೆ ಎನ್‌ಎಂಪಿಎ, ಕಸ್ಟಮ್ಸ್, ಇಮಿಗ್ರೇಶನ್, CISF ಸೇರಿದಂತೆ ವಿವಿಧ ಸಂಸ್ಥೆಗಳು ಸಮನ್ವಯ ಸಾಧಿಸಿದ್ದವು. ಮಂಗಳೂರಿಗೆ ಆಗಮಿಸಿದ ವಿದೇಶಿ ಪ್ರವಾಸಿಗರಿಗೆ ಕಾರ್ಕಳ, ಮೂಡಬಿದಿರೆ ಹಾಗೂ ಪಿಲಿಕುಳ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ವಿಶೇಷ ಟೂರ್ ವ್ಯವಸ್ಥೆ ಕಲ್ಪಿಸಲಾಯಿತು.

ಈ ಯಶಸ್ವಿ ಕಾರ್ಯಾಚರಣೆ ಮಂಗಳೂರನ್ನು ಅಂತಾರಾಷ್ಟ್ರೀಯ ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವತ್ತ ಮತ್ತಷ್ಟು ಬಲ ತುಂಬಿದೆ.

ಹೊಸ ಚೈತನ್ಯ: ಈ ಹಿನ್ನೆಲೆ ದಕ್ಷಿಣ ಕನ್ನಡ ಸಂಸದಕ್ಯಾ. ಬ್ರಿಜೇಶ್‌ಚೌಟ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ತುಳುನಾಡಿನ ಹಳೆಯ ನೌಕಾಯಾನ ಪರಂಪರೆ ಪುನರುಜ್ಜೀವನಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಮಂಗಳೂರಿನಲ್ಲಿ ಚೌಗುಲೆ ಶಿಪ್‌ಯಾರ್ಡ್ ಆಧುನಿಕ ಹಡಗು ನಿರ್ಮಾಣ ಕೇಂದ್ರವಾಗಿ ರೂಪಾಂತರಗೊಂಡಿದ್ದು, “ಫ್ರಿಷಿಯನ್ ಫ್ಯೂಚರ್” ಎಂಬ 8,500 DWT ಸಾಮರ್ಥ್ಯದ ರಫ್ತು ಹಡಗು ನಿರ್ಮಾಣದ ಮೂಲಕ ಸ್ಥಳೀಯ ಉದ್ಯಮ, ಉದ್ಯೋಗ ಮತ್ತು ವಿಶ್ವಾಸಕ್ಕೆ ಉತ್ತೇಜನ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.

ಈ ಬೆಳವಣಿಗೆಗಳು ನರೇಂದ್ರ ಮೋದಿ ಅವರ ಕಡಲ ವಲಯ ಅಭಿವೃದ್ಧಿ ದೃಷ್ಟಿಕೋನಕ್ಕೆ ಹೊಂದಿಕೊಂಡಿದ್ದು, ಮಂಗಳೂರನ್ನು ಜಾಗತಿಕ ಹಡಗು ನಿರ್ಮಾಣ ನಕ್ಷೆಯಲ್ಲಿ ಸ್ಥಿರವಾಗಿ ಸ್ಥಾಪಿಸುತ್ತಿವೆ ಎಂದಿದ್ದಾರೆ.