ಚಿತ್ರದುರ್ಗ: ಹಳೆಯ ವೈಷಮ್ಯದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಕ್ಯಾಂಪ್ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಕಾಂತರಾಜ್ (35) ಎಂದು ಗುರುತಿಸಲಾಗಿದ್ದು, ಆರೋಪಿಯಾದ ನರಸಿಂಹಪ್ಪ (57) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಳೆಯ ದ್ವೇಷವೇ ಕೊಲೆಗೆ ಕಾರಣ : ಪೊಲೀಸ್ ಮಾಹಿತಿ ಪ್ರಕಾರ, 2020ರಲ್ಲಿ ಕಾಂತರಾಜ್ ಮತ್ತು ನರಸಿಂಹಪ್ಪ ನಡುವೆ ಗಲಾಟೆ ನಡೆದಿದ್ದು, ಆ ವೇಳೆ ನರಸಿಂಹಪ್ಪ ಮೇಲೆ ಕಾಂತರಾಜ್ ಹಲ್ಲೆ ನಡೆಸಿದ್ದ. ಈ ಸಂಬಂಧ ನರಸಿಂಹಪ್ಪ ದೂರು ದಾಖಲಿಸಿದ್ದರು. ನಂತರ ಪ್ರಕರಣವನ್ನು ಕೋರ್ಟ್‌ನಲ್ಲಿ ರಾಜಿ ಮಾಡಿಕೊಳ್ಳಲು ನರಸಿಂಹಪ್ಪ ಹಲವು ಬಾರಿ ಪ್ರಯತ್ನಿಸಿದ್ದರು.
ಹಣದ ವಿವಾದ, ಗಲಾಟೆಗೆ ತಿರುವು : ರಾಜಿಗೆ ಒಪ್ಪಿಸುವ ಸಲುವಾಗಿ ನರಸಿಂಹಪ್ಪ 20 ಸಾವಿರ ರೂಪಾಯಿ ನೀಡಿ ಪ್ರಕರಣ ಮುಚ್ಚಲು ಕೇಳಿದ್ದಾನೆ ಎನ್ನಲಾಗಿದೆ. ಆದರೆ ಕಾಂತರಾಜ್ ಇದಕ್ಕೆ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಮತ್ತೆ ವೈಮನಸ್ಯ ಹೆಚ್ಚಾಗಿದೆ.
ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ : ನಿನ್ನೆ ಸಂಜೆ ನಡೆದ ಗಲಾಟೆಯಲ್ಲಿ ನರಸಿಂಹಪ್ಪ, ಕಾಂತರಾಜ್ ಅವರ ತಲೆಗೆ ಕಲ್ಲಿನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ನಂತರ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕಾಂತರಾಜ್ ಸಾವನ್ನಪ್ಪಿದ್ದಾರೆ.
ಆರೋಪಿಯ ಬಂಧನ : ಘಟನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.






















