Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 2.59 ಕೋಟಿ ವಂಚನೆ

ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 2.59 ಕೋಟಿ ವಂಚನೆ

0
161

ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್‌ನಲ್ಲಿ ಹೆಚ್ಚಿನ ಲಾಭದ ಆಮಿಷ ತೋರಿಸಿ ಮಹಿಳೆಯೊಬ್ಬರನ್ನು 2.59 ಕೋಟಿ ರೂ. ವಂಚಿಸಿದ ಘಟನೆ ನಡೆದಿದ್ದು, ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜ್ಞಾ ಸವೂರ್ ಎಂಬ ಮಹಿಳೆಗೆ ಕಳೆದ ಸುಮಾರು 10 ವರ್ಷಗಳಿಂದ ಷೇರು ವ್ಯವಹಾರದ ಕುರಿತು ಸ್ವಲ್ಪ ಜ್ಞಾನವಿದ್ದು, ಅವರು ಆಗಾಗ್ಗೆ ಆನ್‌ಲೈನ್ ಟ್ರೇಡಿಂಗ್ ಕುರಿತು ವಿವಿಧ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಹುಡುಕುತ್ತಿದ್ದರು.

ಡಿಸೆಂಬರ್ 21ರಂದು ಅವರ ಮೊಬೈಲ್‌ಗೆ ವಾಟ್ಸಪ್ ಕರೆ ಬಂದಿದ್ದು, ಕರೆ ಸ್ವೀಕರಿಸಿದ ವೇಳೆ ಆನ್‌ಲೈನ್ ಟ್ರೇಡಿಂಗ್ ಮಾಡಲು ಆಸಕ್ತಿ ಇದೆಯೇ ಎಂದು ವಿಚಾರಿಸಲಾಗಿದೆ. ಇದಕ್ಕೆ ಅವರು ಹೌದು ಎಂದು ಉತ್ತರಿಸಿದ್ದಾರೆ.

ನಂತರ ಟ್ರೇಡಿಂಗ್ ಕುರಿತು ಮಾಹಿತಿ ನೀಡಿದ ಆರೋಪಿಗಳು, ಸಾವಿರ ಜನರಿಗೆ ಮಾತ್ರ ಅವಕಾಶ ಎಂಬ ಹೆಸರಿನಲ್ಲಿ ವರ್ಚುವಲ್ ಅಕೌಂಟ್ ತೆರೆಯಿಸಿ ಟ್ರೇಡಿಂಗ್ ಪ್ರಾರಂಭಿಸಲು ಪ್ರೇರೇಪಿಸಿದ್ದಾರೆ. ಟ್ರೇಡಿಂಗ್ ಮೂಲಕ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 2,59,95,920 ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ನಂತರ ಮಹಿಳೆ ತಮ್ಮ ಹೂಡಿಕೆ ಹಣ ಹಾಗೂ ಲಾಭಾಂಶವನ್ನು ಪಡೆಯಲು ಪ್ರಯತ್ನಿಸಿದಾಗ, ಪ್ರತಿ ಬಾರಿ ಹಣ ಡ್ರಾ ಮಾಡಲು ಶೇ. 20ರಷ್ಟು ಮೊತ್ತವನ್ನು ಡೆಪಾಸಿಟ್ ಮಾಡುವಂತೆ ಸೂಚಿಸಲಾಗಿದೆ. ಡೆಪಾಸಿಟ್ ಮಾಡಿದರೂ ಸಹ ಹಣವನ್ನು ಡ್ರಾ ಮಾಡಲು ಸಾಧ್ಯವಾಗದೇ ಇದ್ದಾಗ, ತಾನು ಮೋಸ ಹೋಗಿರುವುದಾಗಿ ಮಹಿಳೆಗೆ ಅರಿವಾಗಿದೆ.

ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭದ ಆಮಿಷ ತೋರಿಸಿ ವಂಚನೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತನ್ನ ಹಣವನ್ನು ವಾಪಸ್ ಪಡೆಯುವಂತೆ ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.