ಗುಡ್‌ನ್ಯೂಸ್‌: ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ

0
17

ಬೆಂಗಳೂರು: ಸರ್ಕಾರಿ ನೌಕರಿ ಪಡೆಯಲು ವಯಸ್ಸು ಮೀರುತ್ತಿದೆ ಎನ್ನುವ ಆತಂಕದಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ವರ್ಗಗಳಿಗೂ ಅನ್ವಯಿಸುವಂತೆ ಸರ್ಕಾರಿ ನೇಮಕಾತಿಯಲ್ಲಿ ಗರಿಷ್ಠ 5 ವರ್ಷಗಳ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಗೆ ಈ ವಯೋಮಿತಿಗೆ ಸಡಿಲಿಕೆ ಅಳವಡಿಕೆಯಾಗಲಿದೆ. 2027ರ ಡಿಸೆಂಬರ್ 12ರವರೆಗೆ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಇಲಾಖೆಗಳ ಎಲ್ಲಾ ಅಧಿಸೂಚನೆಗಳಿಗೂ ಇದು ಅನ್ವಯವಾಗಲಿದೆ. ವಿಶೇಷವಾಗಿ ಸರ್ಕಾರಿ ನೌಕರಿಗೆ ನೇಮಕವಾಗುವ ಎಲ್ಲ ವರ್ಗಗಳಿಗೂ ಇದರ ಸವಲತ್ತು ಸಿಗಲಿದೆ.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇಗುಲದಲ್ಲಿ 1.99 ಕೋಟಿ ರೂ. ಕಾಣಿಕೆ ಸಂಗ್ರಹ

ಲಕ್ಷಾಂತರ ಯುವಕರಿಗೆ ಸಹಕಾರಿ: ಸಾಮಾನ್ಯ ವರ್ಗ ಉದ್ಯೋಗಾಕಾಂಕ್ಷಿಗಳಿಗೆ ಈಗಿರುವ 35 ವರ್ಷಗಳ ವಯೋಮಿತಿ 40 ವರ್ಷಗಳಿಗೆ ವಿಸ್ತರಣೆಯಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಇದವರೆಗೆ ನಿಗದಿಯಾಗಿದ್ದ ಗರಿಷ್ಠ ವಯೋಮಿತಿ 38 ವರ್ಷಗಳಿಂದ 43 ವರ್ಷಕ್ಕೆ ಏರಿಕೆಯಾಗಲಿದೆ.

ಸರ್ಕಾರದ ಈ ತೀರ್ಮಾನದಿಂದ ರಾಜ್ಯದಲ್ಲಿ ಸರ್ಕಾರಿ ನೌಕರಿಯ ಆಕಾಂಕ್ಷೆ ಹೊಂದಿ ಗರಿಷ್ಠ ವಯೋಮಿತಿ ದಾಟುವ ಹಂತದಲ್ಲಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಸಹಕಾರಿಯಾಗಲಿದೆ. ಇತ್ತೀಚೆಗೆ ಉತ್ತರ ಕರ್ನಾಟಕದ ಹುಬ್ಬಳ್ಳಿ – ಧಾರವಾಡದಲ್ಲಿ ಸರ್ಕಾರಿ ಉದ್ಯೋಗದ ನೇಮಕಾತಿಗೆ ಆಗ್ರಹಿಸಿದ ಯುವಸಮುದಾಯ ಬೀದಿಗಿಳಿದು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿತ್ತು.

Previous articleಸವದತ್ತಿ ಯಲ್ಲಮ್ಮ ದೇಗುಲದಲ್ಲಿ 1.99 ಕೋಟಿ ರೂ. ಕಾಣಿಕೆ ಸಂಗ್ರಹ