ಬೆಂಗಳೂರು: ನಾಯಕತ್ವ ಬದಲಾವಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಹೇಳಿಕೆ ಬೆನ್ನಲ್ಲೇ ಡಿಸಿಎಂ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಜನವರಿ 6 ರಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಡಿಸಿಎಂ ಬೆಂಬಲಿತ ಶಾಸಕರ ಈ ಅಚ್ಚರಿಯ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದಕ್ಕೆ ಶಿವಕುಮಾರ್, `ಶಾಸಕ ಇಕ್ಬಾಲ್‌ಗೆ ಮಾತನಾಡುವ ಚಟ. ಯಾರೂ ಅದನ್ನು ನಂಬಬೇಡಿ’ ಎಂದು ಅಷ್ಟೇ ತಣ್ಣಗೆ ಪ್ರತಿಕ್ರಿಯಿಸಿರುವುದು ಕುತೂಹಲ ಮೂಡಿಸಿದೆ.
ಯತೀಂದ್ರ ಹೇಳಿಕೆ ಎಫೆಕ್ಟ್: ಬೆಳಗಾವಿ ಅಧಿವೇಶನ ಆರಂಭದ ದಿನವೇ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ‘ನಮ್ಮಪ್ಪನೇ 5 ವರ್ಷ ಸಿಎಂ, ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ತೀರ್ಮಾನಿಸಿಲ್ಲ’ ಎಂದು ಹೇಳಿದ್ದು ವ್ಯಾಪಕ ಪ್ರತಿರೋಧಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ದೇಶ ವಿಭಜನೆ ಬಳಿಕ ಪಾಕಿಸ್ತಾನದಲ್ಲಿ ಸಂಸ್ಕೃತ ಕಲಿಕೆಗೆ ಐತಿಹಾಸಿಕ ಹೆಜ್ಜೆ
ಸಿಎಂ-ಡಿಸಿಎಂ ಬೆಂಬಲಿತ ಸಚಿವ, ಶಾಸಕರಿಂದ ವ್ಯಕ್ತವಾಗಿದ್ದ ಪರವಿರೋಧದ ಮಾತುಗಳು ರಾಜಕೀಯವಾಗಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದವು. ಅಷ್ಟೇ ಅಲ್ಲದೆ ಬೆಳಗಾವಿಯಲ್ಲಿ ಖುದ್ದು ಸಿಎಂ ಸಿದ್ದು-ಡಿಕೆಶಿ ಸಹಿತ ಆಪ್ತಬಳಗದಿಂದ ಸರಣಿ ಡಿನ್ನರ್ ಮೀಟಿಂಗ್‌ಗಳಿಗೂ ಕಾರಣವಾಗಿತ್ತು.
ಶುಕ್ರವಾರ ಬೆಳಗಾವಿಯಲ್ಲಿ ಹೇಳಿಕೆ ನೀಡಿ ಅಧಿವೇಶನದ ನಂತರ ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದಿದ್ದ ಶಾಸಕ ಇಕ್ಬಾಲ್ ಹುಸೇನ್ ಶನಿವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜನವರಿ 6ಕ್ಕೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಶೇ. 99ರಷ್ಟು ವಿಶ್ವಾಸವಿದೆ. ಶ್ರಮಕ್ಕೆ ಫಲ ಸಿಗಲೇಬೇಕು. ಈಗ ಸಿಗುತ್ತಿದೆ. ಇದಕ್ಕೆ ಹೈಕಮಾಂಡ್ ಕೂಡಾ ಸ್ಪಂದಿಸುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯನ್ನು ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದಿದ್ದಾರೆ.
ಡಿಸಿಎಂ ಲಕ್ಕಿ ನಂಬರ್?: ಆ ದಿನದ ಮಹತ್ವವೇನು ಎಂಬ ಪ್ರಶ್ನೆಗೆ ಡಿ.ಕೆ ಶಿವಕುಮಾರ್ ಅವರಿಗೆ ಜ. 6 ಮತ್ತು ಜ. 9 ಅದೃಷ್ಟ ಸಂಖ್ಯೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ ಎಂದರು. ಸಿಎಂ ಬದಲಾವಣೆ ಇಲ್ಲ ಎಂದಿದ್ದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಏನೇ ಹೇಳಿಕೊಳ್ಳಲಿ. ರಾಜ್ಯದ ಜನ ಹಾಗೂ ಈ ಭಾಗದ ಶಾಸಕರು ಡಿಕೆಶಿಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಡಿ.ಕೆ ಶಿವಕುಮಾರ್ ಸಿಎಂ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೈಕಮಾಂಡ್ ಹೇಳಿದ್ದೇ ಫೈನಲ್: ಜನವರಿ 6ಕ್ಕೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆಂಬ ಅವರ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಗದಗದ ಲಕ್ಷ್ಮೇಶ್ವರದಲ್ಲಿ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಣಯವೇ ಅಂತಿಮ, ಅದು ನೀಡುವ ಎಲ್ಲ ಆದೇಶವನ್ನು ನಾನು ಪಾಲಿಸುತ್ತೇನೆಂದು ಹೇಳಿದರು. ಇದರ ಹೊರತಾಗಿ ಬೇರೇನನ್ನೂ ಸಿಎಂ ಹೇಳಲಿಲ್ಲ.
ಇಕ್ಬಾಲ್ ಮಾತನ್ನು ನಂಬಬೇಡಿ: ರಾಮನಗರ ಶಾಸಕ ಇಕ್ಬಾಲ್ ಜನವರಿ 6 ದಿನಾಂಕ ನಿಗದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆಶಿ, ಯಾರೂ ಇಕ್ಬಾಲ್ ಹುಸೇನ್ ಮಾತನ್ನು ನಂಬುವುದು ಅಥವಾ ಗಂಭೀರವಾಗಿ ಪರಿಗಣಿಸುವುದು ಬೇಡ ಎಂದರು. ಮುಂದುವರಿದು ಮಾತನಾಡಿ, ಆತನಿಗೆ ಮಾತನಾಡುವ ಚಟ. ಆತನ ವಿರುದ್ಧ ಪಕ್ಷ ಶಿಸ್ತು ಕ್ರಮವನ್ನು ಕೈಗೊಳ್ಳುತ್ತದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ನಿನ್ನೆ ಡಿಕೆ, ಇಂದು ಸಿದ್ದು ದಿಲ್ಲಿಗೆ: ವೋಟ್ ಚೋರಿ ಜಾಗೃತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಶನಿವಾರವೇ ದಿಲ್ಲಿಗೆ ತೆರಳಿದ್ದರೆ, ಸಿಎಂ ಸಿದ್ದರಾಮಯ್ಯ ಭಾನುವಾರ ಬೆಳಗ್ಗೆ ಪ್ರಯಾಣಿಸಿದ್ದಾರೆ. ರಾಜ್ಯದಿಂದ ಸಚಿವರು, ಶಾಸಕರು, ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಈಗಾಗಲೇ ದಿಲ್ಲಿ ತಲುಪಿದ್ದಾರೆ. ನಾಯಕತ್ವ ಬದಲಾವಣೆ ಸಂಬಂಧ ಎದ್ದಿರುವ ಪರವಿರೋಧದ ವಿಚಾರದ ಬಗ್ಗೆ ಹೈಕಮಾಂಡ್ ಗಮನಸೆಳೆಯುವ ಪ್ರಯತ್ನ ಸಿಎಂ-ಡಿಸಿಎಂ ಎರಡೂ ಬಣಗಳಿಂದ ನಡೆದಿದೆ.









