ಬೆಂಗಳೂರು: ಕರಾಳ ರೀತಿಯಲ್ಲಿ ಅಧಿವೇಶನವನ್ನು ಕಾಂಗ್ರೆಸ್ ನಡೆಸಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಭಾಷಣ ಓದದೇ ಹೊರನಡೆದ ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿ ಅಗೌರವ ತೋರಿದ ಘಟನೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ನವರು ಗೂಂಡಾಗಿರಿ ಮಾಡಿದ್ದಾರೆ. ರಾಜ್ಯಪಾಲರಿಗೆ ಘೇರಾವ್ ಮಾಡಿದ್ದನ್ನು ಖಂಡಿಸು ತ್ತೇವೆ. ಗೂಂಡಾಗಿರಿ ಮಾಡಿದವರನ್ನು ಸದನದಿಂದ ಹೊರಗೆ ಹಾಕಬೇಕು. ಸ್ವತಃ ಕಾನೂನು ಮಂತ್ರಿಯೇ ಅಡ್ಡಿಪಡಿಸಿದ್ದಾರೆ.
ರಾಜ್ಯಪಾಲರಿಗೆ ಯಾರೆಲ್ಲ ಅಗೌರವ ತೋರಿಸಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ರಾಹುಲ್, ಸೋನಿಯಾ ಮೆಚ್ಚಿಸಲು ಮಾಡಿರುವ ಕುತಂತ್ರ ಇದು. ಕಾಂಗ್ರೆಸ್ ಗೂಂಡಾ ಪ್ರವೃತ್ತಿಯನ್ನು ಮುಂದುವರೆಸಿದೆ. ರಾಜ್ಯಪಾಲರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯ ಭಾಗ ಎಂದು ಹೇಳಿದರು.
ರಾಜ್ಯಪಾಲರು ಸಂವಿಧಾನದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಈ ಹಿಂದೆ ಭಾರಾದ್ವಾಜ್ ಇದ್ದಾಗಲೂ ಘೋಷಣೆ ಮಾಡಿ ಹೊರಟು ಹೋಗಿದ್ದರು. ಇದರಲ್ಲಿ ತಪ್ಪೇನಾಗಿದೆ? ಆ ಕುರ್ಚಿಯಲ್ಲಿ ಕುಳಿತು ಭಾಷಣ ಪ್ಲೇ ಮಾಡಿ ಹೋಗುವ ಅಧಿಕಾರ ಇದೆ. ಈ ಹಿಂದೆಯೂ ಮೊದಲ ಸಾಲು ಓದಿ, ಕೊನೆಯ ಸಾಲು ಓದಿರುವ ಇತಿಹಾಸವೂ ಇದೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಗವರ್ನರ್ ಮೇಲೆ ಒತ್ತಡ ಹಾಕಿ ಅವರ ಬಾಯಿಂದ ಕೇಂದ್ರ ಸರ್ಕಾರವನ್ನು ಟೀಕಿಸುವ ಕೆಲಸಕ್ಕೆ ಇಳಿದಿದ್ದಾರೆ. ಇದು ಅಕ್ಷಮ್ಯ ಅಪರಾಧ. ಬಾಂಗ್ಲಾದವರಿಗೆ ಮನೆ ಕೊಡುತ್ತೇವೆ ಅಂತಾ ಸರ್ಕಾರ ಹೇಳಿದರೆ, ಅದನ್ನು ಗವರ್ನರ್ ಹೇಳೋಕೆ ಆಗುತ್ತಾ ಎಂದು ಪ್ರಶ್ನಿಸಿ, ಈ ಅಧಿವೇಶನ ಮಾಡುವುದರಲ್ಲಿ ಏನಿತ್ತು ಎಂದರು.






















