Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ ತನಿಖೆಗೆ SIT ರಚನೆ

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ ತನಿಖೆಗೆ SIT ರಚನೆ

0
4

ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದ ಖ್ಯಾತ ಉದ್ಯಮಿ ಹಾಗೂ ಕಾನ್ಸಿಡೆಂಟ್ ಗ್ರೂಪ್ ಚೇರ್ಮನ್ ಡಾ. ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ಪ್ರಕರಣದ ಹಿಂದೆ ಇರುವ ನಿಜವಾದ ಕಾರಣಗಳನ್ನು ಪತ್ತೆಹಚ್ಚಲು ಸಮಗ್ರ ತನಿಖೆ ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕ್ಷ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಅವರು ಎಸ್‌ಐಟಿ ತಂಡದಲ್ಲಿ ಸೇರಲಿದ್ದಾರೆ ಎಂದು ತಿಳಿಸಿದರು. “ಡಾ. ಸಿ.ಜೆ. ರಾಯ್ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಐಟಿ ದಾಳಿಯ ಒತ್ತಡದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡರೇ? ಅಥವಾ ಅವರ ಸಾವಿಗೆ ಬೇರೆ ಯಾವುದಾದರೂ ಕಾರಣ ಇದೆಯೇ ಎಂಬುದನ್ನು ಪತ್ತೆಹಚ್ಚಲು ಸಂಪೂರ್ಣ ತನಿಖೆ ಅಗತ್ಯ” ಎಂದು ಅವರು ಹೇಳಿದರು.

ಇದನ್ನೂ ಓದಿ: ತ್ರಿವಳಿ ಕೊಲೆ: ಮನೆಯ ಗುಂಡಿಯಲ್ಲಿ ತಂದೆ–ತಾಯಿ–ತಂಗಿಯ ಶವ ಪತ್ತೆ

ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದ ಸಮಗ್ರ, ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಿದ್ದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಐಪಿಎಸ್ ಅವರನ್ನು ಮುಖ್ಯ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ಅಕ್ಷಯ್ ಹಾಕೆ, ಐಪಿಎಸ್ ಸೇರಿದಂತೆ ವಿವಿಧ ವಿಭಾಗಗಳು ಮತ್ತು ವಿಶೇಷ ಘಟಕಗಳಿಂದ ನಿಯೋಜಿಸಲಾದ ಹಿರಿಯ ಅಧಿಕಾರಿಗಳು ತಂಡದ ಸದಸ್ಯರಾಗಿರುತ್ತಾರೆ.

ಡಿಸೆಂಬರ್ ತಿಂಗಳಲ್ಲಿಯೇ ಕಾನ್ಸಿಡೆಂಟ್ ಗ್ರೂಪ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ದಾಳಿಯ ನಂತರವೂ ಐಟಿ ಅಧಿಕಾರಿಗಳ ವಿಚಾರಣೆ ಮುಂದುವರಿದಿತ್ತೇ? ಅದರಿಂದ ರಾಯ್ ಮೇಲೆ ಮಾನಸಿಕ ಒತ್ತಡ ಉಂಟಾಗಿತ್ತೇ ಎಂಬ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣದ ಸತ್ಯಾಸತ್ಯತೆ ಹೊರತರಲು ಎಸ್‌ಐಟಿ ತನಿಖೆ ಅನಿವಾರ್ಯವಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆಗೆ ಮಹಿಳಾ ಅಧಿಕಾರಿಯ ಧೈರ್ಯ

ಜನವರಿ 31ರಂದು, ಬೆಂಗಳೂರಿನ ತಮ್ಮ ಕಚೇರಿಯ ಚೇಂಬರ್‌ನಲ್ಲೇ ಡಾ. ಸಿ.ಜೆ. ರಾಯ್ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ಘಟನೆಯ ದಿನ ಐಟಿ ಅಧಿಕಾರಿಗಳು ಕಚೇರಿಗೆ ಆಗಮಿಸಿದ್ದ ವೇಳೆ, “20 ನಿಮಿಷದಲ್ಲಿ ಬರುತ್ತೇನೆ” ಎಂದು ಹೇಳಿ ತಮ್ಮ ಚೇಂಬರ್‌ಗೆ ತೆರಳಿದ ರಾಯ್, ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ನಿಗದಿತ ಸಮಯ ಕಳೆದರೂ ಬಾಗಿಲು ತೆರೆದಿಲ್ಲದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ಚೇರ್‌ನಲ್ಲಿ ಕುಳಿತ ಸ್ಥಿತಿಯಲ್ಲೇ ರಾಯ್ ಮೃತದೇಹ ಪತ್ತೆಯಾಗಿದ್ದು, ಎದೆಗೆ ಗುಂಡು ತಗುಲಿರುವುದು ಕಂಡುಬಂದಿತ್ತು.

ದಕ್ಷಿಣ ಭಾರತದ ದೈತ್ಯ ಉದ್ಯಮಿಯ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಈ ಪ್ರಕರಣದ ಹಿಂದೆ ಇರುವ ನಿಜಾಂಶಗಳು ಏನೆಂಬುದು ಎಸ್‌ಐಟಿ ತನಿಖೆಯಿಂದ ಬಹಿರಂಗವಾಗುವ ನಿರೀಕ್ಷೆಯಿದೆ. ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದಿಂದ ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ನಡೆಯಲಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ.

Previous articleಅಕ್ರಮ ಗಣಿಗಾರಿಕೆ ತಡೆಗೆ ಮಹಿಳಾ ಅಧಿಕಾರಿಯ ಧೈರ್ಯ
Next articleಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ