Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿ: ಮತ್ತೊಂದು ಆದಿಮಾನವನ ಅಸ್ಥಿಪಂಜರ ಪತ್ತೆ – ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಹೊಸ ಆಯಾಮ

ಬಳ್ಳಾರಿ: ಮತ್ತೊಂದು ಆದಿಮಾನವನ ಅಸ್ಥಿಪಂಜರ ಪತ್ತೆ – ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಹೊಸ ಆಯಾಮ

0
56

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಪ್ರಮುಖ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಶ್ಚಿಮ–ನೈರುತ್ಯ ಭಾಗದಲ್ಲಿರುವ ಗೌಡ್ರ ಮೂಲೆಯ ಬೆಟ್ಟಗುಡ್ಡ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಾಗೈತಿಹಾಸಿಕ ಉತ್ಪನನ ಕಾರ್ಯವು ಮಂಗಳವಾರ ಸಾರ್ವಜನಿಕರ ಅಪಾರ ಕುತೂಹಲಕ್ಕೆ ಕಾರಣವಾಯಿತು.

ಈ ಪ್ರದೇಶದಲ್ಲಿ ಈಗಾಗಲೇ ಪತ್ತೆಯಾಗಿದ್ದ ಆದಿಮಾನವನ ಪಳೆಯುಳಿಕೆಯ ಪಕ್ಕದಲ್ಲೇ ಮತ್ತೊಂದು ಅಸ್ಥಿಪಂಜರ ಪತ್ತೆಯಾಗಿರುವುದು ಸಂಶೋಧನಾ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ. ಇದರಿಂದಾಗಿ ಈ ಉತ್ಪನನ ಕಾರ್ಯದ ಮಹತ್ವ ಇನ್ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟು: ವಿರೋಧ ಪಕ್ಷದ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಮಹಿಳಾ ಸಂಸದರ ಒತ್ತಾಯ

ಇತ್ತೀಚೆಗೆ ದೊರೆತ ಮೊದಲ ಅಸ್ಥಿಪಂಜರದ ಪಕ್ಕದಲ್ಲಿ ಉತ್ಪನನ ಮುಂದುವರಿಸಿದಾಗ, ಎರಡನೇ ಅಸ್ಥಿಪಂಜರ ಗೋಚರಿಸಿದೆ. ಈ ಕುರಿತು ಮಾಹಿತಿ ನೀಡಿದ ಅಮೆರಿಕದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಪನನ ಕಾರ್ಯದ ಸಹ ನಿರ್ದೇಶಕಿ ಡಾ. ನಮಿತಾ ಎಸ್. ಸುಗಂಧಿ ಅವರು, “ಎದೆಯ ಭಾಗದ ಮೇಲೆ ದೊಡ್ಡ ಗಾತ್ರದ ಕಲ್ಲು ಇರುವುದರಿಂದ ಅದನ್ನು ಸರಿಸಿದರೆ ಮೊದಲನೇ ಪಳೆಯುಳಿಕೆಗೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಅದನ್ನು ಹಾಗೆಯೇ ಉಳಿಸಲಾಗಿದೆ” ಎಂದು ತಿಳಿಸಿದರು.

ಜನಸಂದಣಿ, ವಿದ್ಯಾರ್ಥಿಗಳ ಭೇಟಿ: ಎರಡನೇ ಆದಿಮಾನವನ ಅಸ್ಥಿಪಂಜರ ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ, ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಉತ್ಪನನ ಸ್ಥಳಕ್ಕೆ ಆಗಮಿಸಿದರು. ಅಲ್ಲದೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಸ್ಥಳಕ್ಕೆ ಭೇಟಿ ನೀಡಿ ಪುರಾತನ ಇತಿಹಾಸದ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ: ನಂದಿನಿ (ಬಮುಲ್) ಬ್ರಾಂಡ್ ಅಂಬಾಸಿಡರ್‌ ಆಗಿ ಸುಧಾ ರಾಣಿ ನೇಮಕ

ವಿದ್ಯಾರ್ಥಿಗಳು ಪುರಾತನ ಮಾನವ ಜೀವನ, ಶವ ಸಂಸ್ಕಾರ ಪದ್ಧತಿ, ಹಾಗೂ ಪಳೆಯುಳಿಕೆಗಳ ವೈಜ್ಞಾನಿಕ ಮಹತ್ವದ ಕುರಿತು ಸಂಶೋಧಕರಿಂದ ವಿವರಗಳನ್ನು ಕುತೂಹಲದಿಂದ ಆಲಿಸಿದರು. ಇತಿಹಾಸವನ್ನು ನೇರವಾಗಿ ನೋಡುವ ಅಪರೂಪದ ಅವಕಾಶ ದೊರೆತ ಹಿನ್ನೆಲೆಯಲ್ಲಿ ಅವರಲ್ಲಿ ವಿಶೇಷ ಉತ್ಸಾಹ ಕಂಡುಬಂತು.

ಶಿಲಾಯುಗದ ಆಯುಧಗಳು, ವಾಸದ ನೆಲೆ: ಉತ್ಪನನ ನಡೆಯುತ್ತಿರುವ ಗೌಡ್ರಮೂಲೆಯ ಎತ್ತರದ ಬೆಟ್ಟ ಪ್ರದೇಶದ ವಿಶಾಲ ಮೈದಾನದಲ್ಲಿ ಸೂಕ್ಷ್ಮ ಶಿಲಾಯುಗದ ಚಿಕ್ಕ ಗಾತ್ರದ ಕಲ್ಲಿನ ಆಯುಧಗಳು ಪತ್ತೆಯಾಗಿವೆ. ಇವುಗಳನ್ನು ಬೇಟೆ, ಚರ್ಮ ಸುಲಿಯುವುದು ಹಾಗೂ ಮಾಂಸ ಸಂಸ್ಕರಣೆಗೆ ಬಳಸಿರಬಹುದೆಂದು ಸಂಶೋಧಕರು ಅಂದಾಜಿಸಿದ್ದಾರೆ.

ಇದೇ ಪ್ರದೇಶದಲ್ಲಿ ಕಲ್ಲುರಾಶಿಗಳು ಕಂಡುಬಂದಿರುವುದು, ಅಲ್ಲಿ ಮಾನವರು ವಾಸವಿದ್ದ ನೆಲೆ ಇದ್ದಿರಬಹುದೆಂಬ ಸೂಚನೆ ನೀಡುತ್ತಿದೆ. ಜೊತೆಗೆ ಚಿಕ್ಕ ಹಾಗೂ ದೊಡ್ಡ ಗಾತ್ರದ ಮಡಕೆಗಳ ಪತ್ತೆ ಈ ಅಂದಾಜಿಗೆ ಮತ್ತಷ್ಟು ದೃಢತೆ ನೀಡುತ್ತಿದೆ ಎಂದು ಡಾ. ನಮಿತಾ ಎಸ್. ಸುಗಂಧಿ ವಿವರಿಸಿದರು.

ಇದನ್ನೂ ಓದಿ: ಮೈಸೂರ್ ಸ್ಯಾಂಡಲ್‌ಸೋಪ್ ರಾಯಭಾರಿಯಾಗಿ ತಮನ್ನಾ

ಅತಿಯಾದ ಜನಸಂದಣಿ ಬಗ್ಗೆ ಆತಂಕ: ಉತ್ಪನನ ಸ್ಥಳಕ್ಕೆ ಹೆಚ್ಚುತ್ತಿರುವ ಜನಸಂದಣಿಯಿಂದ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. “ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಆಸಕ್ತಿ ಸಂತಸದ ವಿಷಯ. ಆದರೆ ಉತ್ಪನನ ಕಾರ್ಯ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅನಗತ್ಯ ಓಡಾಟದಿಂದ ಪಳೆಯುಳಿಕೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ” ಎಂದು ಡಾ. ನಮಿತಾ ಎಸ್. ಸುಗಂಧಿ ಎಚ್ಚರಿಸಿದರು. ಆದ್ದರಿಂದ ಸ್ಥಳದ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಸಾವಿರಾರು ವರ್ಷಗಳ ಹಿಂದಿನ ಇತಿಹಾಸ: ಈ ಉತ್ಪನನ ಸ್ಥಳಕ್ಕೆ ಸುಮಾರು 3,500 ರಿಂದ 5,000 ವರ್ಷಗಳ ಹಿಂದಿನ ಇತಿಹಾಸವಿದ್ದು, ಇದು ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಪತ್ತೆಗಳು ಮಾನವ ನಾಗರಿಕತೆಯ ಆರಂಭಿಕ ಹಂತಗಳ ಕುರಿತು ಮಹತ್ವದ ಮಾಹಿತಿಯನ್ನು ನೀಡುವ ಸಾಧ್ಯತೆ ಇದ್ದು, ಮುಂದಿನ ಸಂಶೋಧನೆಗಳಿಂದ ಇನ್ನಷ್ಟು ಮಹತ್ವದ ಅಂಶಗಳು ಬೆಳಕಿಗೆ ಬರಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Previous articleʼಹಯಗ್ರೀವʼ ನ ‘ಸೇನೆ ಮುಖ್ಯಸ್ಥ’ ಧನ್ವೀರ್ ದರ್ಶನ
Next articleಆಂಧ್ರಪ್ರದೇಶದ ರೌಡಿಶೀಟರ್ ಮುಳಬಾಗಿಲು ಗಡಿಯಲ್ಲಿ ಹತ್ಯೆ