Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ ಚೆನ್ನಮ್ಮ ಮೂರ್ತಿ ಮುಂದೆ ‘ಜೈ ಮಹಾರಾಷ್ಟ್ರ’ ಘೋಷಣೆ

ಬೆಳಗಾವಿ ಚೆನ್ನಮ್ಮ ಮೂರ್ತಿ ಮುಂದೆ ‘ಜೈ ಮಹಾರಾಷ್ಟ್ರ’ ಘೋಷಣೆ

0
41

ಬೆಳಗಾವಿ: ಕ್ರಿಕೆಟ್ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ ನಂತರ ನಡೆಸಿದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೆಲವರು ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿಯ ಎದುರಲ್ಲೇ ‘ಜೈ ಮಹಾರಾಷ್ಟ್ರ’ ಘೋಷಣೆ ಕೂಗಿ ಹಾಡು ಹಾಕಿ ಕುಣಿದು ವಿವಾದ ಸೃಷ್ಟಿಸಿರುವ ಘಟನೆ ಬೆಳಗಾವಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಗಡಿನಾಡಿನ ಸಂವೇದನಶೀಲತೆಯನ್ನು ಮರೆತಂತೆ ನಡೆದುಕೊಂಡದ್ದು ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ನಗರದ ಪ್ರಮುಖ ವೃತ್ತದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಎದುರು ಕೆಲ ಯುವಕರು ಕ್ರಿಕೆಟ್ ಗೆಲುವಿನ ಸಂಭ್ರಮದಲ್ಲಿ ಜೈ ಮಹಾರಾಷ್ಟ್ರ ಹಾಡು ಹಾಕಿ ಕುಣಿದು ಸಂಭ್ರಮ ಆಚರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ. ರಾಜ್ಯದ ಹೆಮ್ಮೆ ಎನ್ನುವ ಐತಿಹಾಸಿಕ ವ್ಯಕ್ತಿತ್ವದ ಮೂರ್ತಿಯ ಮುಂದೆ ಈ ರೀತಿಯ ಘೋಷಣೆಗಳನ್ನು ಕೂಗಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹದ್ದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಗಡಿನಾಡು ಬೆಳಗಾವಿ ಎಂದರೆ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯ ವಿಷಯದಲ್ಲಿ ಸದಾ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ, ವಿಶೇಷವಾಗಿ ಐತಿಹಾಸಿಕ ನಾಯಕಿಯ ಮೂರ್ತಿಯ ಮುಂದೆ ಇಂತಹ ಘೋಷಣೆಗಳು ಕೇಳಿಬರುವುದು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುವ ಸಾಧ್ಯತೆ ಇದೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.

ಸ್ಥಳೀಯ ಸಂಘಟನೆಗಳ ಮುಖಂಡರು ಈ ಕುರಿತು ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗುವುದು ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದೆ. ಈ ಘಟನೆಗೆ ಕಾರಣರಾದವರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ತಕ್ಷಣ ಗಮನಹರಿಸಿ ವಿಡಿಯೋದಲ್ಲಿರುವವರನ್ನು ಗುರುತಿಸಿ ವಿಚಾರಣೆ ನಡೆಸಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಹೆಚ್ಚುತ್ತಿದೆ. ಗಡಿನಾಡಿನ ಸೌಹಾರ್ದ ಕಾಪಾಡುವುದು ಆಡಳಿತ ಮತ್ತು ಪೊಲೀಸ್ ಇಲಾಖೆಯ ಹೊಣೆಗಾರಿಕೆ ಎಂಬ ಮಾತುಗಳು ಕೇಳಿಬರುತ್ತಿವೆ.