ಅಥಣಿ: ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಹೊಸದಾಗಿ ಆರಂಭಗೊಂಡಿರುವ ಎಸ್.ಎಂ. ನಾರಗೊಂಡ ಇಂಟರ್ನ್ಯಾಷನಲ್ ಸ್ಕೂಲ್ ಲೋಕಾರ್ಪಣೆ ಹಾಗೂ ಶಾಲೆಯ ಪ್ರಥಮ ವರ್ಷದ ಸ್ನೇಹ ಸಮ್ಮೇಳನ ಕಾರ್ಯಕ್ರಮವು ಜ. 24 ಮತ್ತು 25ರಂದು ಅದ್ದೂರಿಯಾಗಿ ಜರುಗಲಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಅಥಣಿ ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿದಾನಂದ ಸವದಿ ಹಾಗೂ ವಿವೇಕ್ ನಾರಗೊಂಡ ಅವರು, ಜ. 24ರಂದು ಸಂಜೆ ಶಾಲೆಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಕ್ರೇಜಿಸ್ಟಾರ್ ಖ್ಯಾತಿಯ ಡಾ. ವಿ. ರವಿಚಂದ್ರನ್ ಅವರು ಶಾಲೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿ: ನವನಗರದಲ್ಲಿ ಚಿರತೆ ಪ್ರತ್ಯಕ್ಷ – ವೈರಲ್ ಆದ ವಿಡಿಯೋ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ, ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಭಾಗವಹಿಸಲಿದ್ದಾರೆ. ಶೇಗುಣಸಿ ಮಹಂತ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಹಾರುಗೇರಿಯಲ್ಲಿ ಕಳೆದ ಏಳು ವರ್ಷಗಳಿಂದ ಯಶಸ್ವಿಯಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಅಲ್ಲಿ 2000ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದೇ ಅನುಭವ ಮತ್ತು ಗುಣಮಟ್ಟದ ಶಿಕ್ಷಣ ಮಾದರಿಯನ್ನು ಅಥಣಿ ತಾಲೂಕಿನ ಮಕ್ಕಳಿಗೂ ಒದಗಿಸುವ ಉದ್ದೇಶದಿಂದ ನಾರಗೊಂಡ ಇಂಟರ್ನ್ಯಾಷನಲ್ ಸ್ಕೂಲ್ ಆರಂಭಿಸಲಾಗಿದೆ ಎಂದು ಆಡಳಿತ ಮಂಡಳಿ ವಿವರಿಸಿತು.
ಇದನ್ನೂ ಓದಿ: KLE ಸೊಸೈಟಿ ಪದಾಧಿಕಾರಿಗಳ ಆಯ್ಕೆ ಅವಿರೋಧ
ಜ. 25ರಂದು ಶಾಲೆಯ ಪ್ರಥಮ ವರ್ಷದ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ಚಟುವಟಿಕೆಗಳ ಪ್ರದರ್ಶನ ಮತ್ತು ಪೋಷಕರೊಂದಿಗೆ ಸಂವಾದ ನಡೆಯಲಿದೆ. ಈ ಮೂಲಕ ಅಥಣಿ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ಸಿಗಲಿದೆ ಎಂಬ ವಿಶ್ವಾಸವನ್ನು ಶಾಲಾ ಆಡಳಿತ ಮಂಡಳಿ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಚಿದಾನಂದ ಸವದಿ, ನಾರಗೊಂಡ ಇಂಟರ್ನ್ಯಾಷನಲ್ ಸ್ಕೂಲ್ ಅಧ್ಯಕ್ಷ ವಿವೇಕ್ ನಾರಗೊಂಡ, ಪ್ರಾಚಾರ್ಯ ಇ.ಜಿ. ದಿಕ್ಷೀತ, ಮುನೀರ ಖಾನಾಪೂರ ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.























