ಬೆಳಗಾವಿ: ಚಳಿಗಾಲ ಅಧಿವೇಶನಕ್ಕೆ ಕ್ಷಣಗಣನೆ ಮಾತ್ರ. ಹೀಗಾಗಿ ನಗರವೆಲ್ಲ ಖಾಕಿ ಕಣ್ಗಾವಲಿನಲ್ಲಿ ಮುಳುಗಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದೆಂಬ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಈ ಬಿಗಿ ಭದ್ರತೆಯ ಮಧ್ಯೆ ಬಿಜೆಪಿ ಮಾಜಿ ಶಾಸಕ ಅನಿಲ ಬೆನಕೆ ಅವರ ಒಂದು ಬ್ಯಾನರ್ ಬೆಳಗಾವಿ ಶಾಂತಿಗೆ ಭಂಗ ತಂದಿದೆ.
ಚನ್ನಮ್ಮ ವೃತ್ತದಲ್ಲಿ ಅನಿಲ ಬೆನಕೆ ಹಾಕಲಾಗಿದ್ದ ಬಿಜೆಪಿ ನಾಯಕರ ಸ್ವಾಗತ ಬ್ಯಾನರ್‌ನಲ್ಲಿ ಒಂದು ಸಾಲು ಕನ್ನಡವೂ ಇಲ್ಲ.! ಈ ವಿಚಾರ ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲೇ ಬ್ಯಾನರ್‌ನ್ನು ಹರಿದು ಹಾಕಿದ್ದಾರೆ. ಸ್ಥಳೀಯ ಕನ್ನಡಪರ ಸಂಘಟನೆಗಳು “ಅಧಿವೇಶನ ನಡೆಯುತ್ತಿರುವ ಸಂವೇದನಾಶೀಲ ಸಂದರ್ಭದಲ್ಲಿ ಕನ್ನಡವಿಲ್ಲದ ಬ್ಯಾನರ್ ಅಸಹ್ಯ ಮತ್ತು ಅವಮಾನ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಇನ್ನೂ ಮುಖ್ಯವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳು ಈಗಾಗಲೇ ಅಧಿವೇಶನ ಅವಧಿಯಲ್ಲಿ ಎಂಇಎಸ್ ಸಂಘಟನೆಗೆ ಯಾವುದೇ ಮಹಾಮೇಳಾವ್‌ಗೆ ಅನುಮತಿ ಇಲ್ಲ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ, ಅಂತಹುದರಲ್ಲಿ ಅನಿಲ ಬೆನಕೆ ಕನ್ನಡವನ್ನು ಬದಿಗೊತ್ತಿ ಮರಾಠಿಯಲ್ಲಿ ಬ್ಯಾನರ್ ಹಾಕಿದ್ದು ಬೆಳಗಾವಿ ವಾತಾವರಣವನ್ನು ಬಿಸಿ ಮಾಡಿದೆ.
“ಬೆಳಗಾವಿಯಲ್ಲಿ ಅಧಿವೇಶನ ಎಂದರೆ ಕನ್ನಡದ ಗೌರವ ಮೊದಲ ಆದ್ಯತೆ. ಇಂತಹ ಮರಾಠಿ ಬ್ಯಾನರ್‌ಗಳು ಯಾವ ಸಂದೇಶ ತರುತ್ತವೆ” ಎಂಬ ಪ್ರಶ್ನೆ ಈಗ ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದೆ.























