ಬಾಗಲಕೋಟೆ: ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಗುರುವಾರ ಹಿಂಸಾರೂಪ ಪಡೆದಿದೆ. ಮಹಾಲಿಂಗುಪುರ ಬಳಿಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ತುಂಬಿಕೊಂಡು ನಿಂತಿದ್ದ 50ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಹಾಗೂ ಹಲವು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದಾಗಿ ಭಾಗಶಃ ಜಿಲ್ಲೆಯಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಕಂಡುಬಂದಿದೆ.
ಗುರುವಾರ ಮುಧೋಳ ಬಂದ್‌ಗೆ ಕರೆ ನೀಡಲಾಗಿತ್ತು. ಸ್ಥಳೀಯ ವ್ಯಾಪಾರಿಗಳು ಬೆಂಬಲ ಸೂಚಿಸಿದ್ದರಿಂದ ಬಂದ್ ಯಶಸ್ವಿಯಾಯಿತು. ಬೆಳಿಗ್ಗೆ 11 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದ ವೇದಿಕೆಯಲ್ಲಿ ರೈತ ಮುಖಂಡರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅತ್ತ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿ ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಿದ್ದು ತಿಳಿಯುತ್ತಿದ್ದಂತೆಯೇ ರೈತ ಮುಖಂಡರು ಕಾರ್ಖಾನೆಗೆ ಮುತ್ತಿಗೆ ಹಾಕಲು ಕರೆ ನೀಡಿದರು.
ಕೆಲ ಹೊತ್ತಲ್ಲೇ ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಭಾರೀ ಸಂಖ್ಯೆಯಲ್ಲಿ ಜನ ಮುತ್ತಿದರು. ಮುಧೋಳ ತಾಲೂಕಿನ ಸಂಗಾನಟ್ಟಿ ಕ್ರಾಸ್‌ನಲ್ಲಿ ಮೊದಲ ಟ್ರ್ಯಾಕ್ಟರ್ ಕೆಡವಿ ಬೆಂಕಿ ಇಡಲಾಯಿತು. ನಂತರ ಹಲವೆಡೆ ಇಂಥ ಘಟನೆಗಳು ನಡೆಯುತ್ತಲೇ ಇದ್ದವು. ಸಂಜೆ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣ ರಣರಂಗವಾಯಿತು. 50ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳಲ್ಲಿ ತುಂಬಿದ ಕಬ್ಬಿಗೆ ಬೆಂಕಿ ಇಡಲಾಯಿತು. ಕಾರ್ಖಾನೆಗೆ ಆಗಮಿಸಿದ್ದ ರೈತರು, ಕಾರ್ಮಿಕರ ಬೈಕ್‌ಗಳನ್ನೂ ಸುಡಲಾಯಿತು. ಆದರೆ ಈ ಕೃತ್ಯವನ್ನು ರೈತರು ಎಸೆಗಿಲ್ಲ ಎಂದಿರುವ ರೈತ ಮುಖಂಡರು, ನಮ್ಮ ಹೋರಾಟದ ದಿಕ್ಕು ತಪ್ಪಿಸಲು ದುಷ್ಕರ್ಮಿಗಳು ಕೃತ್ಯ ಎಸೆಗಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ರೈತರ ಹೋರಾಟ ಸ್ಥಳಕ್ಕೆ ಆಗಮಿಸಿ ಸರ್ಕಾರದ ನಿಲುವು ತಿಳಿಸಬೇಕೆಂದು ರೈತರು ಪಟ್ಟು ಹಿಡಿದಿದ್ದು, ಹೋರಾಟ ತೀವ್ರ ಸ್ವರೂಪದಲ್ಲಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಕಬ್ಬಿಗೆ ದರ ನಿಗದಿಪಡಿಸುವಾಗ ಇಳುವರಿ ಪ್ರಮಾಣವನ್ನೂ ನಿಗದಿ ಮಾಡಿದ್ದು, ಜಿಲ್ಲೆಯಲ್ಲಿ ರೈತರು ಕಾರ್ಖಾನೆ ಮತ್ತು ರೈತರ ನಡುವಿನ ಒಪ್ಪಂದದ ದರಕ್ಕೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎರಡೂ ಕಡೆಯಿಂದ ಹಗ್ಗಜಗ್ಗಾಟ ಮುಂದವರಿದಿದೆ. ಈ ನಡುವೆ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕಾರ್ಖಾನೆಗೆ ಕಬ್ಬು ಪೂರೈಸಲು ರೈತರು ಒಪ್ಪಿದರೆ ಕಾರ್ಖಾನೆ ಆರಂಭಿಸುತ್ತೇವೆ. ಪೊಲೀಸರು ಸೂಕ್ತ ಭದ್ರತೆ ನೀಡಬೇಕೆಂದು ಕೋರಿದ್ದರು. ಅದಾದ ನಂತರವೂ ಇಷ್ಟು ದೊಡ್ಡ ಮಟ್ಟದಲ್ಲಿ ಘಟನೆ ನಡೆದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
