ಸಾರ್ವಜನಿಕರೂ ವಾಟ್ಸಾಪ್ ಮೂಲಕ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಬಹದು

0
11

ಬೆಂಗಳೂರು: ಸಾರ್ವಜನಿಕರೂ ಸಹ ವಾಟ್ಸಾಪ್ ಮೂಲಕ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಮಿತ್ರರೊಂದಿಎ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಪ್ರಮುಖ ನಿರ್ಧಾರಗಳ ಕುರಿತಂತೆ ಮಾತನಾಡಿರುವ ಅವರು ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ಸಲಹೆಗಳನ್ನು ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು. ಅದರಂತೆ 17 ಸಾವಿರ ಮಂದಿ ಸಲಹೆ ನೀಡಿದ್ದು ಒಂದು ತಂಡ ಸಲಹೆಗಳನ್ನು ಪರಿಶೀಲಿಸುತ್ತಿದೆ. ಇದೇ ತಿಂಗಳ 9ರಂದು ಸಭೆ ನಡೆಸಿ ಅತ್ಯುತ್ತಮ ಸಲಹೆಗಳನ್ನು ಆಯ್ಕೆ ಮಾಡಲಾಗುವುದು.
ಇತ್ತೀಚೆಗೆ ಸಾಲು ಸಾಲು ರಜೆಗಳಿದ್ದ ಕಾರಣ ಬೆಂಗಳೂರಿನ ವಿವಿಧೆಡೆ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಈ ಸಂಬಂಧ ಈಗಾಗಲೇ ಔಟರ್‌ ರಿಂಗ್‌ ರಸ್ತೆ ಕಂಪನಿಗಳು ಹಾಗೂ ಸಂಚಾರ ಪೊಲೀಸ್‌ ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ. ಬೆಂಗಳೂರಿನ ರಸ್ತೆ ಗುಂಡಿಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಚೀಫ್‌ ಎಂಜಿನಿಯರ್‌ಗಳು ಸಂಚಾರ ಪೊಲೀಸರ ಜೊತೆಗೂಡಿ ಕೆಲಸ ಮಾಡುವಂತೆ ಸಲಹೆ ನೀಡಿದ್ದೇನೆ. ಹಾಗೆಯೇ ಸಾರ್ವಜನಿಕರೂ ಸಹ ವಾಟ್ಸಾಪ್ ಮೂಲಕ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ.
350 ಕಿಲೋ ಮೀಟರ್‌ನಷ್ಟು ಟೆಂಡರ್‌ ಶೋರ್‌ ರಸ್ತೆಗಳು ನಿರ್ಮಾಣವಾಗಿದ್ದು ಅದನ್ನು ಅಗೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇನ್ಮುಂದೆ ಯಾರೂ ಕೂಡ ಈ ರಸ್ತೆಗಳನ್ನು ಅಗೆಯಬಾರದು. ಪಕ್ಕದಲ್ಲೇ ಕೇಬಲ್‌ಗಳನ್ನು ಕೊಂಡೊಯ್ಯಲು ಡೆಕ್‌ಗಳನ್ನು ಮಾಡಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಬಾಕಿ ಇರುವ ಬಿಲ್‌ಗಳಲ್ಲಿ ಶೇ. 50ರಷ್ಟು ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಅದಕ್ಕಿಂತ ಹೆಚ್ಚು ನೀಡಲಾಗಿದ್ದು, ಎಲ್ಲಾ ಕಾಂಟ್ರಾಕ್ಟರ್‌ಗಳು ಎಂಜಿನಿಯರ್‌ಗಳ ಜೊತೆಗೂಡಿ ಕೆಲಸ ಮಾಡಿ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಮುಗಿಸಬೇಕು. ವಿಕೋಪ ಪರಿಹಾರಕ್ಕಾಗಿ ವಿಶ್ವ ಬ್ಯಾಂಕ್‌ನಿಂದ 3ಸಾವಿರ ಕೋಟಿ ಹಣ ಕೇಳಲಾಗಿದೆ.
ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಕಡಿಮೆ ಮಾಡಲು ಕೈಗೆತ್ತಿಕೊಳ್ಳಬೇಕಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಗಿತ್ತು. 9 ಕಂಪನಿಗಳು ಅರ್ಜಿ ಸಲ್ಲಿಸಿದ್ದವು. 8 ಕಂಪನಿಗಳು ಆಯ್ಕೆಯಾಗಿದ್ದು, ವಿವರಣಾತ್ಮಕ ವರದಿ ಸಲ್ಲಿಸುವಂತೆ ಅವರನ್ನು ಕೋರಲಾಗಿದೆ ಎಂದರು.

Previous articleಖೋ ಖೋ : ಸಬ್ ಜೂನಿಯರ್ ಕರ್ನಾಟಕ ತಂಡ ತಮಿಳುನಾಡಿಗೆ ಪ್ರಯಾಣ
Next articleಸಿನಿಮಿಯ ಮಾದರಿಯಲ್ಲಿ ತಾಳಿಸರ ಎಗರಿಸಿದ ಕಳ್ಳರು