ಹುಬ್ಬಳ್ಳಿ: ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೂ ನೀಡುವ ಪಶ್ಚಿಮ ಬಂಗಾಳ ಸರ್ಕಾರದ ನೀತಿಯನ್ನು ಖಂಡಿಸಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು ಮಂಗಳವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ನೂರಾರು ಜಾತಿಗಳ ಜನರು ಅವಕಾಶ ವಂಚಿತರಾಗಿ ಸಮಾಜದಲ್ಲಿ ಪಾಪ ಪ್ರಜ್ಞೆಯಿಂದ ಬದುಕುತ್ತಿದ್ದಾರೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿ ಸೌಲಭ್ಯಗಳನ್ನು ನೀಡಿ ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಪಶ್ಚಿಮ ಬಂಗಾಳದ ಹೈಕೋರ್ಟ್ ಅಲ್ಪಸಂಖ್ಯಾತರನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಿಂದ ಹೊರಗಿಟ್ಟು ಅನ್ಯಾಯ ಸರಿಪಡಿಸುವ ಐತಿಹಾಸಿಕ ತೀರ್ಪು ನೀಡಿದೆ. ಹಿಂದುಳಿದ ವರ್ಗಗಳಿಗೆ ನಿರಂತರವಾಗಿ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟದ ಓಲೈಕೆ ರಾಜಕಾರಣವನ್ನು ನಾವು ಖಂಡಿಸುತ್ತೇವೆ. ಮುಂಬರುವ ದಿನಗಳಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ದೇಶದ ಯಾವುದೇ ರಾಜ್ಯಗಳಲ್ಲಿ ಅನ್ಯಾಯಕ್ಕೊಳಗಾದ ಹಿಂದುಳಿದ ವರ್ಗಗಳ ಬೆಂಬಲವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಸತೀಶ ಶೇಜವಾಡಕರ, ಬಸವರಾಜ ಕುಂದಗೋಳ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ಮಲ್ಲಪ್ಪ ಶಿರಕೋಳ, ಅರುಣ ಲೋಖರೆ, ನಿಖಿಲೇಶ ಕುಂದಗೋಳ, ವಿನಾಯಕ ಲದ್ವಾ, ಬಸವರಾಜ ಬೆಳಗಲಿ, ಲಕ್ಷ್ಮೀಕಾಂತ ಘೋಡೆಕೆ, ನೀಲಕಂಠ ಕಳಸದಮಠ, ರಾಜು ಜರತಾರಘರ, ಅನುರಾಧಾ ಚಿಲ್ಲಾಳ, ಗೋಪಾಲ ಕಲ್ಲೂರ, ಜಗದೀಶ ಬುಳ್ಳಣ್ಣವರ ಇತರರು ಇದ್ದರು.