ಹೆಣ್ಣು ಎಂದರೆ ತ್ಯಾಗ ಮತ್ತು ಮಮತೆಯ ಸಾಕಾರ ರೂಪ ಎಂಬುದು ಜಗತ್ತಿನ ನಂಬಿಕೆ. ಆದರೆ, ಇಡೀ ಸಮಾಜವೇ ಹೆಣ್ಣಿನ ಈ ಮೃದು ಸ್ವಭಾವವನ್ನು ಕೊಂಡಾಡುವ ಹೊತ್ತಿನಲ್ಲಿ ತುಮಕೂರಿನಲ್ಲಿ ನಡೆದ ಈ ಘಟನೆ ಕೇಳಿದರೆ ಅಕ್ಷರಶಃ ನಿಮ್ಮ ಮೈ ನಡುಗಬಹುದು!
ಗಂಡನನ್ನೇ ಕೊಂದ ಪತ್ನಿ, ಆತನ ತಿಥಿ ಕಾರ್ಯ ಮುಗಿಯುವ ಮುನ್ನವೇ ಪ್ರಿಯಕರನ ಜೊತೆ ಹಸೆಮಣೆ ಏರಿದ್ದಾಳೆ. ಇವಳಿಗೆ ಇದೆಲ್ಲ ಬೇಕಿತ್ತಾ? ಅನ್ನೋ ಪ್ರಶ್ನೆ ಈಗ ಇಡೀ ಊರನ್ನೇ ಕಾಡುತ್ತಿದೆ!
ಅದು ಜನವರಿ 30. ತುಮಕೂರು ತಾಲೂಕಿನ ದಾಸರಹಳ್ಳಿಯ ಪರಮೇಶ್ ಎಂಬುವವರು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಾರೆ. ಪತ್ನಿ ಆಶಾ ಸಾರ್ವಜನಿಕವಾಗಿ ಕಣ್ಣೀರು ಹಾಕುತ್ತಾ ನನ್ನ ಗಂಡನಿಗೆ ಹಾರ್ಟ್ ಅಟ್ಯಾಕ್ ಆಯ್ತು ಎಂದು ಕಥೆ ಕಟ್ಟುತ್ತಾಳೆ.
ಪಾಪ, ಆಕೆಯ ಕಣ್ಣೀರನ್ನು ನಂಬಿದ ಸಂಬಂಧಿಕರು ಸಂಪ್ರದಾಯದಂತೆ ಅಂತ್ಯಕ್ರಿಯೆ ಮುಗಿಸುತ್ತಾರೆ. ಆದರೆ, ಆ ಕಣ್ಣೀರಿನ ಹಿಂದೆ ಅಡಗಿದ್ದು ಕಾಮದ ಕರಾಳ ಹಸಿವು ಅನ್ನೋದು ಯಾರಿಗೂ ಗೊತ್ತಿರಲಿಲ್ಲ!”
ಗಂಡ ಸತ್ತ ಇಪ್ಪತ್ತೇ ದಿನಕ್ಕೆ ಆಶಾ ಹಸಿರು ಬಳೆ ತೊಟ್ಟು, ಚಂದ್ರಪ್ಪ ಎಂಬುವವನ ಜೊತೆ ಎರಡನೇ ಮದುವೆಯಾಗುತ್ತಾಳೆ. ಸತ್ತ ಮನೆಯಲ್ಲಿ ಇನ್ನೂ ಶೋಕದ ಛಾಯೆ ಮಾಸುವ ಮುನ್ನವೇ ಸೊಸೆಯ ಮದುವೆ ಸಂಭ್ರಮ ಕಂಡು ಪರಮೇಶ್ ಸಹೋದರಿಯರಿಗೆ ಅನುಮಾನ ಶುರುವಾಗುತ್ತದೆ. ಕೂಡಲೇ ಹೆಬ್ಬೂರು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ. ಅಲ್ಲಿಂದ ಶುರುವಾಗಿದ್ದೇ ನೋಡಿ ಅಸಲಿ ಇನ್ವೆಸ್ಟಿಗೇಷನ್!
ಪೊಲೀಸರು ತನಿಖೆ ಶುರು ಮಾಡಿದಾಗ ಆಶಾ ಮತ್ತು ಚಂದ್ರಪ್ಪನ ಲವ್ವಿ-ಡವ್ವಿ ಪುರಾಣ ಬಯಲಾಗುತ್ತದೆ. ಈ ಚಂದ್ರಪ್ಪ ಸಾಮಾನ್ಯನಲ್ಲ, ಮೊದಲ ಪತ್ನಿಯ ಸಾವಿನ ಕೇಸಿನಲ್ಲಿ ಜೈಲು ಕಂಡು ಬಂದಿದ್ದ ಕಿರಾತಕ! ಪೊಲೀಸರು ಆಶಾರನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಆಕೆ ಗಡಗಡ ನಡುಗುತ್ತಾ ರಹಸ್ಯ ಬಿಚ್ಚಿಡುತ್ತಾಳೆ. ‘ನಮಗೆ ಮದುವೆಯಾಗೋ ಆಸೆ ಇತ್ತು, ಈತ ಅಡ್ಡ ಬರ್ತಿದ್ದ ಅದಕ್ಕೆ ಉಸಿರುಗಟ್ಟಿಸಿ ಕೊಂದೆ’ ಎಂದು ತಪ್ಪೊಪ್ಪಿಕೊಳ್ಳುತ್ತಾಳೆ. ಫೆಬ್ರವರಿ 26ರಂದು ಪೊಲೀಸರು ಹೂತಿಟ್ಟಿದ್ದ ಶವವನ್ನು ಹೊರತೆಗೆದು ಮಹಜರು ನಡೆಸಿದಾಗ ಪರಮೇಶ್ ಕೊಲೆಯಾಗಿರುವುದು ಸಾಬೀತಾಗುತ್ತದೆ.”
ಹನಿಮೂನ್ ಮೂಡ್ನಲ್ಲಿದ್ದ ಈ ಜೋಡಿ ಈಗ ಕಂಬಿ ಎಣಿಸುತ್ತಿದೆ. ಮೂರನೇ ಮದುವೆಯ ಆಸೆಗೆ ಎರಡನೇ ಗಂಡನ ಪ್ರಾಣ ತೆಗೆದ ಈ ಖತರ್ನಾಕ್ ಮಹಿಳೆಯ ಕೃತ್ಯ ಕಂಡು ಇಡೀ ಜಿಲ್ಲೆಯೇ ಬೆಚ್ಚಿಬಿದ್ದಿದೆ. ಪ್ರೀತಿ ಹೆಸರಲ್ಲಿ ಪ್ರಾಣ ತೆಗೆಯುವ ಇಂತಹ ಕಿರಾತಕರಿಗೆ ಕಾನೂನು ತಕ್ಕ ಪಾಠ ಕಲಿಸಲೇಬೇಕು!























