SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು: CM ಪ್ರಮಾಣವಚನ, ಟ್ರಾಫಿಕ್ ಅಲರ್ಟ್ – ಅರ್ಧ ದಿನ ರಜೆ

ಬೆಂಗಳೂರು: CM ಪ್ರಮಾಣವಚನ, ಟ್ರಾಫಿಕ್ ಅಲರ್ಟ್ – ಅರ್ಧ ದಿನ ರಜೆ

0
144

ಸಿಎಂ ಪ್ರಮಾಣವಚನ ಸಮಾರಂಭ: ಬೆಂಗಳೂರು ಟ್ರಾಫಿಕ್ ಪೊಲೀಸ್‌ರಿಂದ ವಿಶೇಷ ಮಾರ್ಗಸೂಚಿ – ವಿಧಾನಸೌಧ, ವಿಕಾಸಸೌಧ ಸಿಬ್ಬಂದಿಗೆ ಮಧ್ಯಾಹ್ನದ ಬಳಿಕ ರಜೆ ಘೋಷಣೆ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ವ್ಯಾಪಕ ಭದ್ರತಾ ಮತ್ತು ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಸಂಜೆ 4.05 ಗಂಟೆಗೆ ನಡೆಯಲಿರುವ ಈ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳಿಂದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ನಗರದ ಕೇಂದ್ರ ಭಾಗದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂಚಾರ ನಿರ್ಬಂಧ ವಿಧಿಸಿದ್ದಾರೆ. ಜೊತೆಗೆ ಹಲವು ಪ್ರದೇಶಗಳಲ್ಲಿ ವಾಹನ ನಿಲುಗಡೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸಂಚಾರ ನಿರ್ಬಂಧ: ಸಂಚಾರ ನಿರ್ಬಂಧಿತ ರಸ್ತೆಗಳಲ್ಲಿ ಕಬ್ಬನ್ ರಸ್ತೆ (ಬಿಆರ್‌ವಿ ಜಂಕ್ಷನ್‌ನಿಂದ ಸಿಟಿಒ ಜಂಕ್ಷನ್ ಹಾಗೂ ಸಿಟಿಒ ವೃತ್ತದಿಂದ ಲೋಕಭವನದವರೆಗೆ), ಬಾಲೇಕುಂದ್ರಿ ಜಂಕ್ಷನ್‌ನಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಕೆ.ಆರ್. ವೃತ್ತದಿಂದ ಕಾಫಿ ಬೋರ್ಡ್ ಜಂಕ್ಷನ್, ರೇಸ್ ಕೋರ್ಸ್ ರಸ್ತೆ, ಕ್ವೀನ್ಸ್ ಜಂಕ್ಷನ್‌ನಿಂದ ಸಿಟಿಒ ಹಾಗೂ ಲೋಕಭವನ ಮಾರ್ಗ ಮತ್ತು ಸೇಂಟ್ ಮಾರ್ಕ್ಸ್ ರಸ್ತೆಯಿಂದ ಕ್ವೀನ್ಸ್ ಜಂಕ್ಷನ್ ಮೂಲಕ ಸಿಟಿಒ ಕಡೆಗಿನ ರಸ್ತೆಗಳು ಸೇರಿವೆ.

ಪರ್ಯಾಯ ಮಾರ್ಗ: ಜನಿಕರಿಗೆ ಅನುಕೂಲವಾಗುವಂತೆ ಶಿವಾಜಿನಗರ, ಕನ್ನಿಂಗ್‌ಹ್ಯಾಮ್ ರಸ್ತೆ, ನೃಪತುಂಗ ರಸ್ತೆ, ಶಿವಾನಂದ ವೃತ್ತ, ಔಟರ್ ರಿಂಗ್ ರಸ್ತೆ, ಹೆಬ್ಬಾಳ ಸೇರಿದಂತೆ ಇತರೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವಾಹನ ನಿಲುಗಡೆ: ಇದೇ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಲೋಕಭವನ ರಸ್ತೆ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ. ಭದ್ರತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಸರಕು ಸಾಗಣೆ ವಾಹನಗಳು ಸೇರಿದಂತೆ ಭಾರಿ ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.

ಅರ್ಧ ದಿನ ರಜೆ ಘೋಷಣೆ : ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜೂನ್ 3ರಂದು ಮಧ್ಯಾಹ್ನದ ನಂತರ ಅಧಿಕೃತ ರಜೆ ಘೋಷಿಸಿದೆ. ಲೋಕಭವನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂದಣಿ ಹಾಗೂ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ, ಭದ್ರತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಮೂರು ಪ್ರಮುಖ ಆಡಳಿತಾತ್ಮಕ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಹಂತದ ಸಿಬ್ಬಂದಿಗೂ ಅರ್ಧ ದಿನದ ರಜೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭವು ರಾಜ್ಯ ರಾಜಕೀಯದಲ್ಲಿ ಮಹತ್ವದ ಘಟ್ಟವಾಗಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಬೆಂಗಳೂರು ಪೊಲೀಸರು ಮತ್ತು ಆಡಳಿತ ಯಂತ್ರ ಭಾರೀ ಸಿದ್ಧತೆಗಳನ್ನು ಕೈಗೊಂಡಿವೆ. ಸಾರ್ವಜನಿಕರು ಸಂಚಾರ ನಿರ್ಬಂಧಿತ ಪ್ರದೇಶಗಳನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.