SK Home Ad
Home ನಮ್ಮ ಜಿಲ್ಲೆ ಬೀದರ್ 45 ಕೋಟಿ ರೂ. ಲೂಟಿ: ವಿ.ವಿ. ವಿಶ್ರಾಂತ ಕುಲಪತಿ ಸೇರಿ ಆರು ಬಂಧನ

45 ಕೋಟಿ ರೂ. ಲೂಟಿ: ವಿ.ವಿ. ವಿಶ್ರಾಂತ ಕುಲಪತಿ ಸೇರಿ ಆರು ಬಂಧನ

0
182

ಬೀದರ್: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2017-18ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ 45 ಕೋಟಿ ರೂ. ಹೇರಾಫೇರಿ ಸಂಬಂಧಿಸಿದಂತೆ ವಿವಿ ವಿಶ್ರಾಂತ ಕುಲಪತಿ ಡಾ.ಎಚ್.ಡಿ. ನಾರಾಯಣಸ್ವಾಮಿ ಸೇರಿದಂತೆ 6 ಮಂದಿಗೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರ ತಂಡವು, ಹಿಂದಿನ ಕುಲಪತಿ ಡಾ. ನಾರಾಯಣ ಸ್ವಾಮಿ, 2017-2018ರ ಅವಧಿಯಲ್ಲಿ ವಿವಿಯ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್ (ಸದ್ಯಕ್ಕೆ ನಿವೃತ್ತಿ), ಎಫ್‌ಡಿಎ ಮೃತ್ಯುಂಜಯ ಹಿರೇಮಠ, ಬೆಂಗಳೂರು ಎಂಟರ್‌ಪ್ರೈಸಸ್ ಮಾಲೀಕ ಬೊಪಣ್ಣ, ಮಂಜುನಾಥ ಮತ್ತು ಹಣವನ್ನು ಖಾತೆಗೆ ಹಾಕಿಸಿಕೊಂಡು ಡ್ರಾ ಮಾಡಿಕೊಟ್ಟ ರಾಮಗೊಂಡ ಅವರಿಗೆ ಬಂಧಿಸಿದೆ.

ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿ ಚರ್ಚೆಯಲ್ಲಿರುವ ರಾಜ್ಯದ ಏಕೈಕ ಪಶು ವಿವಿಗೆ ಈ ಬೆಳವಣಿಗೆಯು ಕಪ್ಪು ಚುಕ್ಕೆಯನ್ನೇ ಅಂಟಿಸಿದೆ. ಖೊಟ್ಟಿ ಬಿಲ್‌ಗಳನ್ನು ಸೃಷ್ಟಿಸಿ ಭಾರಿ ಗೋಲ್ಮಾಲ್ ನಡೆಸಲಾಗಿದೆ ಎನ್ನುವ ದೂರಿನ ಮೇಲೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಬೆಂಗಳೂರು, ಬೀದರ್‌ನಲ್ಲಿ ಕಾರ್ಯಾಚರಣೆ ನಡೆಸಿ ಆಪಾದಿತರನ್ನು ಅರೆಸ್ಟ್ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿವಿಯ ಎಫ್‌ಡಿಎ ಮೃತ್ಯುಂಜಯ ಹಿರೇಮಠ ಅವರು ಬೆಂಗಳೂರು ಮೂಲದ ಖಾಸಗಿ ಎಂಟರ್‌ಪ್ರೈಸಸ್ ಜೊತೆಯಲ್ಲಿ ಸೇರಿಕೊಂಡು ವಿವಿಧ ಖರೀದಿ ಹೆಸರಿನಲ್ಲಿ ಖೊಟ್ಟಿ ಬಿಲ್‌ಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಲೂಟಿ ಹೊಡೆದಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ನಷ್ಟ ತಂದಿದ್ದಾರೆ ಎಂಬ ಆರೋಪವಿತ್ತು. ಈ ಪ್ರಕರಣದ ಸಂಬಂಧ ನ್ಯಾಯಾಲಯ ಸಹ ವಾರೆಂಟ್ ಜಾರಿಗೊಳಿಸಿತ್ತು. ಇದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆಗಿನ ಕುಲಪತಿ ಸೇರಿ ಆರು ಮಂದಿಗೆ ಬಂಧಿಸಿದೆ.