Home Advertisement
Home ನಮ್ಮ ಜಿಲ್ಲೆ ಬಳ್ಳಾರಿ “3 ವರ್ಷದ ಸಾಧನೆ ಎಂದರೆ ಸುಳ್ಳಿನ ಸಾಧನೆ”: ರಾಮುಲು ವಾಗ್ದಾಳಿ

“3 ವರ್ಷದ ಸಾಧನೆ ಎಂದರೆ ಸುಳ್ಳಿನ ಸಾಧನೆ”: ರಾಮುಲು ವಾಗ್ದಾಳಿ

0
69

“2028ರಲ್ಲಿ ಬಿಜೆಪಿ ಸರ್ಕಾರ ಖಚಿತ”: ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಭವಿಷ್ಯವಾಣಿ

ಬಳ್ಳಾರಿ: ಬಿ. ಶ್ರೀರಾಮುಲು ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಮೂರು ವರ್ಷದಲ್ಲಿ ನೂರು ಸುಳ್ಳು ಹೇಳಿರುವುದೇ ಈ ಸರ್ಕಾರದ ಸಾಧನೆ” ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಾ ಆಡಳಿತ ನಡೆಸುತ್ತಿದೆ ಎಂದು ಅವರು ಕಿಡಿಕಾರಿದರು.

ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕೆ ಮಾಡಿದ ಶ್ರೀರಾಮುಲು, “ಸುಳ್ಳಿನ ಮಾಲೀಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸುಳ್ಳಿನ ಸಾಕ್ಷಿದಾರ” ಎಂದು ವ್ಯಂಗ್ಯವಾಡಿದರು. ಸರ್ಕಾರ ಸಂಪೂರ್ಣವಾಗಿ ಸುಳ್ಳಿನ ಆಧಾರದ ಮೇಲೆ ನಡೆಯುತ್ತಿದೆ ಎಂದು ಆರೋಪಿಸಿದರು.

ರೈತರ ಸಮಸ್ಯೆಗಳನ್ನು ಉಲ್ಲೇಖಿಸಿದ ಅವರು, ಹಾಲು ಉತ್ಪಾದಕರಿಗೆ ಹಣ ಪಾವತಿಸಿಲ್ಲ, ಬೀಜ ಬಿತ್ತನೆ ವೆಚ್ಚ ಹೆಚ್ಚಾಗಿದೆ ಮತ್ತು ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು. “ರೈತರ ಸಾವಿನ ಅಂಕಿ ಅಂಶವೇ ಈ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಇದು ಮಾನಗೆಟ್ಟ ಸರ್ಕಾರ” ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ನೀಡುತ್ತಿರುವ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಟೀಕಿಸಿದರು. ನೀರು, ವಿದ್ಯುತ್, ಲ್ಯಾಂಡ್ ರಿಜಿಸ್ಟ್ರೇಷನ್ ಸೇರಿದಂತೆ ಹಲವು ಸೇವೆಗಳ ದರ ಏರಿಕೆಯಾಗಿದೆ ಎಂದು ಆರೋಪಿಸಿದ ಶ್ರೀರಾಮುಲು, “ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರನ್ನು ಮರುಳು ಮಾಡುವ ಕೆಲಸ ನಡೆಯುತ್ತಿದೆ” ಎಂದರು.

ಸಾರಿಗೆ ನೌಕರರ ಮುಷ್ಕರ ತಡೆಯಲು ಸರ್ಕಾರ ವಿಫಲವಾಗಿದೆ ಎಂದು ಹೇಳಿದ ಅವರು, ಸಾರಿಗೆ ಇಲಾಖೆಯಲ್ಲಿ ಹಳೆಯ ಬಸ್‌ಗಳ ಸ್ಥಿತಿ ದುಸ್ಥಿತಿಯಲ್ಲಿದೆ ಎಂದು ದೂರಿದರು. “ಪಂಚರ್ ಹಾಕಲು ಹಣ ಇಲ್ಲ, ಬಾಗಿಲು ಕಿತ್ತುಹೋದರೂ ದುರಸ್ತಿ ಮಾಡುತ್ತಿಲ್ಲ” ಎಂದು ಸರ್ಕಾರದ ಆಡಳಿತ ಕ್ರಮವನ್ನು ಟೀಕಿಸಿದರು.

ಅಂಗನವಾಡಿ ನೌಕರರು ಹಾಗೂ ಸರ್ಕಾರಿ ಸಿಬ್ಬಂದಿಗೆ ಸರಿಯಾದ ವೇತನ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ ಅವರು, “ಎಲ್ಲಾ ಇಲಾಖೆಗಳಲ್ಲೂ ಸರ್ಕಾರ ವಿಫಲವಾಗಿದೆ. ಹಾಗಿದ್ದರೆ ಮೂರು ವರ್ಷದ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?” ಎಂದು ಪ್ರಶ್ನಿಸಿದರು. ಜಾತಿ ರಾಜಕಾರಣದ ಆರೋಪ ಮಾಡಿದ್ದ ಶ್ರೀರಾಮುಲು, “ಸಿದ್ದರಾಮಯ್ಯ ಸಮಾಜಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು. ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗಲೇ ನಿಷೇಧ ವಾಪಸ್ ಪಡೆದಿರುವುದು ಏಕೆ ಎಂದು ಪ್ರಶ್ನಿಸಿದರು.

ನಾಸೀರ್ ಹುಸೇನ್ ಸಂಬಂಧಿಸಿದ ವಿವಾದವನ್ನೂ ಉಲ್ಲೇಖಿಸಿದ ಅವರು, ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು. “ಹಿಂದೂ ಹಬ್ಬಗಳ ಮೇಲೆ ದಾಳಿ ನಡೆಯುತ್ತಿದೆ” ಎಂದು ಹೇಳಿದರು. ವಾಲ್ಮೀಕಿ ಹಗರಣದ ವಿಚಾರ ಪ್ರಸ್ತಾಪಿಸಿದ ಶ್ರೀರಾಮುಲು, “ಹಗರಣದಲ್ಲಿ ಹಣ ಹೊಡೆದಿದ್ದಕ್ಕೆ ಸಾಧನಾ ಸಮಾವೇಶ ಮಾಡ್ತೀರಾ?” ಎಂದು ಪ್ರಶ್ನಿಸಿದರು. ಇದೇ ವೇಳೆ ರೈತರ ಸಾವಿನ ವಿಚಾರದಲ್ಲೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, “ಸೂರ್ಯ-ಚಂದ್ರ ಇರುವಷ್ಟು ಸತ್ಯವಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ” ಎಂದರು. ನೀಟ್ ಪರೀಕ್ಷೆ ವಿವಾದದ ಕುರಿತು ಮಾತನಾಡಿದ ಅವರು, ತನಿಖೆ ನಡೆಯುತ್ತಿದ್ದು ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಎಸ್ಸಿ ಮೀಸಲಾತಿ ವಿಚಾರದಲ್ಲೂ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ಮೂಲಕ ನ್ಯಾಯ ಒದಗಿಸಿತ್ತು ಎಂದು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯುದ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಿತವಾಗಿ ಬಳಕೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಸಮರ್ಥಿಸಿದರು. “ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿಲ್ಲ. ಭಾರತ ಅಭಿವೃದ್ಧಿಯಲ್ಲಿ ಮೂರನೇ ಸ್ಥಾನದಲ್ಲಿದೆ” ಎಂದು ಹೇಳಿದರು.

ಕೇಂದ್ರ ಸಚಿವರು ಖರ್ಚು ಕಡಿಮೆ ಮಾಡುತ್ತಿದ್ದಾರೆ ಎಂದು ಹೇಳಿದ ಶ್ರೀರಾಮುಲು, “ಸಿದ್ದರಾಮಯ್ಯ ಆರು-ಎಂಟು ವಾಹನಗಳಲ್ಲಿ ಸಂಚರಿಸುತ್ತಾರೆ. ಮೊದಲು ಅವರು ಸುಧಾರಿಸಬೇಕು” ಎಂದು ಟೀಕಿಸಿದರು.