Home Advertisement
Home ಸಿನಿ ಮಿಲ್ಸ್ ನಟ ದರ್ಶನ್ ಜೈಲು ವಾಸ: ಒಡೆದ ಹೃದಯದ ಎಮೋಜಿ ಹಾಕಿ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

ನಟ ದರ್ಶನ್ ಜೈಲು ವಾಸ: ಒಡೆದ ಹೃದಯದ ಎಮೋಜಿ ಹಾಕಿ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!

0
38

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಕೋರ್ಟ್ ಮತ್ತೆ ಜಾಮೀನು ನಿರಾಕರಿಸಿದೆ. ದರ್ಶನ್ ಜೈಲು ವಾಸ ಮುಂದುವರಿದ ಬೆನ್ನಲ್ಲೇ, ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಈಗ ಭಾರಿ ವೈರಲ್ ಆಗುತ್ತಿದ್ದು, ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದರ್ಶನ್ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ವಿಜಯಲಕ್ಷ್ಮಿ ತಮ್ಮ ಅಧೀಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಒಂದನ್ನು ಹಂಚಿಕೊಂಡಿದ್ದಾರೆ. ಯಾವುದೇ ದೀರ್ಘ ಬರಹ ಬರಿಯದೇ, ಕೇವಲ ಗಂಡ ದರ್ಶನ್‌ ಫೋಟೋ ಮೇಲೆ ‘ಒಡೆದ ಹೃದಯ’ದ (Broken Heart) ಎಮೋಜಿಯನ್ನು ಮಾತ್ರ ಹಾಕಿ ಪೋಸ್ಟ್ ಮಾಡಿದ್ದಾರೆ. ಪತಿಯ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ವಿಜಯಲಕ್ಷ್ಮೀಗೆ ಕೋರ್ಟ್ ತೀರ್ಪು ತೀವ್ರ ನಿರಾಶೆ ಮತ್ತು ಹತಾಶೆ ಮೂಡಿಸಿದೆ ಎಂಬುದಕ್ಕೆ ಈ ಒಡೆದ ಹೃದಯದ ಪೋಸ್ಟ್ ಸಾಕ್ಷಿಯಾಗಿದೆ ಎಂದು ಅಭಿಮಾನಿಗಳು ಸಹ ಬೆಸರವನ್ನ ವ್ಯಕ್ತಪಡಿಸಿ, ʻಬಾಸ್‌ ಇಂದಲ್ಲ ನಾಳೆ ಹೊರ ಬಂದೇ ಬರುತ್ತಾರೆʼ ಎಂದು ಸಮಾಧಾನ ಸೂಚಿಸುತ್ತಿದ್ದಾರೆ.

ಅಷ್ಟೇ ಅಲ್ಲದೇ.. ವಿಜಯಲಕ್ಷ್ಮಿ ಈ ಭಾವುಕ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ಇದಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. “ಅಮ್ಮ ಧೈರ್ಯವಾಗಿರಿ, ನಮ್ಮ ಬಾಸ್‌ಗೆ ನ್ಯಾಯ ಸಿಕ್ಕೇ ಸಿಗುತ್ತದೆ”, “ಈ ಕಷ್ಟದ ದಿನಗಳು ಕರಗಿ ಶೀಘ್ರದಲ್ಲೇ ಹೊರಬರುತ್ತಾರೆ” ಎಂದು ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಪತ್ನಿ ವಿಜಯಲಕ್ಷ್ಮಿಯವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಹಾಗೇ ಇದೆಲ್ಲ ಒಂದು ಕಡೆ ಆದ್ರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಾಗಿನಿಂದಲೂ ವಿಜಯಲಕ್ಷ್ಮಿ ದರ್ಶನ್ ಪರವಾಗಿ ಕಾನೂನು ಹೋರಾಟ ನಡೆಸುತ್ತಲೇ ಇದ್ದಾರೆ. ದರ್ಶನ್ ಜೈಲು ಸೇರಿದಾಗಿನಿಂದಲೂ ವಿಜಯಲಕ್ಷ್ಮಿ ತೀವ್ರ ಮಾನಸಿಕ ಸಂಕಷ್ಟ ಎದುರಿಸುತ್ತಿದ್ದು, ಈಗ ಕೋರ್ಟ್‌ನಿಂದ ಮತ್ತೆ ಹಿನ್ನಡೆಯಾಗಿರುವುದು ನಟ ಹಾಗೂ ಅವರ ಕುಟುಂಬಕ್ಕೆ ಭಾರಿ ಆಘಾತ ತಂದಿದೆ ಎನ್ನಲಾಗಿದೆ.

ಸದ್ಯ ದರ್ಶನ್ ಜಾಮೀನು ಅರ್ಜಿ ವಜಾಗೊಂಡಿರುವುದರಿಂದ, ಮುಂದಿನ ದಿನಗಳಲ್ಲಿ ಅವರ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ.. ವಿಜಯಲಕ್ಷ್ಮಿ ಈ ಒಂಟಿ ಎಮೋಜಿ ಪೋಸ್ಟ್ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.