Home Advertisement
Home ಸುದ್ದಿ ದೇಶ ಗ್ರಾಹಕರಿಗೆ ದಿಗಿಲು ಮೂಡಿಸಿದ ಇಂಧನ ದರ: ದೆಹಲಿಯಲ್ಲಿ 80 ರೂ. ಗಡಿ ದಾಟಿದ ಸಿಎನ್‌ಜಿ

ಗ್ರಾಹಕರಿಗೆ ದಿಗಿಲು ಮೂಡಿಸಿದ ಇಂಧನ ದರ: ದೆಹಲಿಯಲ್ಲಿ 80 ರೂ. ಗಡಿ ದಾಟಿದ ಸಿಎನ್‌ಜಿ

0
67

ನವದೆಹಲಿ: ದೆಹಲಿ ಸೇರಿದಂತೆ ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಇಂದಿನಿಂದ ಸಂಕುಚಿತ ನೈಸರ್ಗಿಕ ಅನಿಲ (CNG) ಮತ್ತಷ್ಟು ದುಬಾರಿಯಾಗಿದೆ. ಪ್ರಮುಖ ನೈಸರ್ಗಿಕ ಅನಿಲ ವಿತರಕ ಸಂಸ್ಥೆಯಾದ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL), ಮೇ 17ರ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರುವಂತೆ ಸಿಎನ್‌ಜಿ ಚಿಲ್ಲರೆ ಮಾರಾಟ ದರವನ್ನು ಪ್ರತಿ ಕೆಜಿಗೆ 1 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಗ್ರಾಹಕರಿಗೆ ತಗುಲಿರುವ ಎರಡನೇ ಬೆಲೆ ಏರಿಕೆಯ ಬಿಸಿ ತಗುಲಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಮಾರುಕಟ್ಟೆ ತತ್ತರಿಸಿದ್ದು, ಹಾರ್ಮುಜ್ ಜಲಸಂಧಿಯನ್ನು ದೀರ್ಘಕಾಲ ಮುಚ್ಚಿರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ. ಜಾಗತಿಕವಾಗಿ ಇನ್‌ಪುಟ್ ಗ್ಯಾಸ್ ವೆಚ್ಚ ಹೆಚ್ಚಿರುವುದು ಹಾಗೂ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದರಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಈ ಅನಿವಾರ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಐಜಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಿರುವಾಗ ಪರ್ಯಾಯ ಇಂಧನಗಳಿಗೆ ಹೋಲಿಸಿದರೆ ಸಿಎನ್‌ಜಿ ಇಂದಿಗೂ ಶೇ. 45 ರಷ್ಟು ಚಾಲನಾ ವೆಚ್ಚವನ್ನು ಉಳಿಸಲಿದೆ ಎಂದು ಸಂಸ್ಥೆ ಸಮರ್ಥಿಸಿಕೊಂಡಿದೆ.

ಹೊಸ ದರಗಳ ಪಟ್ಟಿ: ಈ ಇತ್ತೀಚಿನ ಪರಿಷ್ಕರಣೆಯ ನಂತರ, ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ 80.09 ರೂಪಾಯಿಗಳಿಗೆ ತಲುಪಿದೆ. ಇನ್ನುಳಿದಂತೆ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಕೆಜಿಗೆ ರೂ. 88.70, ಗುರುಗ್ರಾಮದಲ್ಲಿ ರೂ. 85.12, ಮುಜಫರ್‌ನಗರ ಮತ್ತು ಮೀರತ್‌ನಲ್ಲಿ ರೂ. 88.58 ಹಾಗೂ ಕಾನ್ಪುರದಲ್ಲಿ ಗರಿಷ್ಠ ರೂ. 91.42 ರಷ್ಟಾಗಿದೆ. ಇತ್ತ ಆರ್ಥಿಕ ರಾಜಧಾನಿ ಮುಂಬೈನಲ್ಲೂ ಸಿಎನ್‌ಜಿ ದರ ಕೆಜಿಗೆ 84 ರೂಪಾಯಿಗಳಿಗೆ ಏರಿಕೆಯಾಗಿದೆ. ಕೇವಲ ಸಿಎನ್‌ಜಿ ಮಾತ್ರವಲ್ಲದೆ, ದೇಶದಲ್ಲಿ ನಾಲ್ಕು ವರ್ಷಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರಗಳೂ ಸಹ ಸರಿಸುಮಾರು 3 ರೂಪಾಯಿಗಳಷ್ಟು ದುಬಾರಿಯಾಗಿವೆ.

ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ: ಸಾರ್ವಜನಿಕ ಸಾರಿಗೆಯ ಬಹುಪಾಲು ವಾಹನಗಳು ಸಿಎನ್‌ಜಿ ನಂಬಿಕೊಂಡಿರುವುದರಿಂದ ಈ ಬೆಲೆ ಏರಿಕೆಯು ನೇರವಾಗಿ ಚಿಲ್ಲರೆ ಹಣದುಬ್ಬರಕ್ಕೆ ಕಾರಣವಾಗಲಿದೆ. ಈಗಾಗಲೇ ಮುಂಬೈನ ಆಟೋರಿಕ್ಷಾ ಒಕ್ಕೂಟಗಳು ತಮ್ಮ ಕನಿಷ್ಠ ದರವನ್ನು 1 ರೂಪಾಯಿಯಷ್ಟು ಹೆಚ್ಚಿಸಲು ಒತ್ತಾಯಿಸುತ್ತಿವೆ. ಪ್ರಯಾಣ ದರ ಹೆಚ್ಚಳದಿಂದಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದ್ದು, ಗೃಹ ಉಳಿತಾಯ ಕೊಡ ಕುಂಠಿತಗೊಳ್ಳುತ್ತದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ, ಕಚ್ಚಾ ತೈಲವನ್ನು ಹೆಚ್ಚಿನ ಬೆಲೆಗೆ ಖರೀದಿಸಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವ ಕಾರಣ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳಾದ IOCL, BPCL ಮತ್ತು HPCL ಪ್ರತಿದಿನ ಸುಮಾರು 1,600 ಕೋಟಿ ರೂಪಾಯಿಗಳ ಭಾರಿ ನಷ್ಟ ಅನುಭವಿಸುತ್ತಿವೆ. ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಇಂಧನ ಉಳಿಸುವಂತೆ ಮತ್ತು ಸಾಧ್ಯವಾದಷ್ಟು ‘ವರ್ಕ್ ಫ್ರಮ್ ಹೋಮ್’ (ಮನೆಯಿಂದಲೇ ಕೆಲಸ) ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಾಗರಿಕರಿಗೆ ಕರೆ ನೀಡಿದ್ದರು. ಇದಕ್ಕೆ ಪೂರಕವಾಗಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸರ್ಕಾರಿ ಕಚೇರಿಗಳಿಗೆ ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ಮಾಡುವ ನಿಯಮವನ್ನು ಈಗಾಗಲೇ ಘೋಷಿಸಿಲಾಗಿದೆ.