ಬೆಂಗಳೂರು: ನಗರದ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಉದಯೋನ್ಮುಖ ಪ್ರತಿಭೆ ರಂಗಾರೋಹಣಕ್ಕೆ ಈಗ ಅಣಿಯಾಗಿದೆ. ಗುರು, ವಿದುಷಿ ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ಚಾರ್ವಿ ಶ್ರೀ ರೆಡ್ಡಿ ಮೇ 10ರಂದು ಭರತನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ.
ನಗರದ ಮಲ್ಲೇಶ್ವರಂ ವಯ್ಯಲಿ ಕಾವಲ್‌ನ ಪಾರ್ಕ್ ಬಡಾವಣೆಯಲ್ಲಿರುವ ಶ್ರೀ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಆರ್.ಕೆ. ಶಿಲ್ಪಾ ಮತ್ತು ಚನ್ನಕೇಶವ ರೆಡ್ಡಿ ಅವರ ಪುತ್ರಿ ಚಾರ್ವಿ, ತನ್ನ 6ನೇ ವರ್ಷದಿಂದಲೇ ಗುರು ಸುಪರ್ಣಾ ಅವರಲ್ಲಿ ನೃತ್ಯ ಕಲಿಕೆ ಆರಂಭಿಸಿದ್ದು, ಸತತ ಒಂದು ದಶಕದ ಅವಧಿಯ ಅಭ್ಯಾಸದ ನಂತರ ತನ್ನ ನೃತ್ಯ ಕೌಶಲವನ್ನು ರಂಗಪ್ರವೇಶದ ಮೂಲಕ ಪಡಮೂಡಿಸುತ್ತಿರುವುದು ಆಶಾದಾಯಕ ನಡೆಯಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್ -ವ್ಯಾಸ ವಿವಿಯ ಪ್ರೊ. ಕರುಣಾ ವಿಜೇಂದ್ರ, ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ ಕುಮಾರ್, ಎಚ್.ಎನ್. ಇಂಜಿನಿಯರಿಂಗ್ ಕಾಲೇಜು ಚೇರ್ಮನ್ ವೆಂಕಟ ಶಿವಾರೆಡ್ಡಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ವಿದ್ವಾನ್ ವಿನಯ್ ಶರ್ವ ಸಾಕ್ಷಿ ಆಗಲಿದ್ದಾರೆ.
ನಟುವಾಂಗದಲ್ಲಿ ಗುರು ಸುಪರ್ಣಾ, ಗಾಯನದಲ್ಲಿ ವಿದ್ವಾನ್ ಬಾಲ ಸುಬ್ರಹ್ಮಣ್ಯ ಶರ್ಮಾ, ಕೊಳಲಿನಲ್ಲಿ ವಿದ್ವಾನ್ ರಘು ಸಿಂಹ, ವೀಣೆಯಲ್ಲಿ ವಿದ್ವಾನ್ ಪ್ರಶಾಂತ್ ಇತರರು ಸಹಕಾರ ನೀಡಲಿದ್ದಾರೆಂದು ಸಂಸ್ಥೆ ನಿರ್ದೇಶಕ ಸಾಯಿ ವೆಂಕಟೇಶ್ ತಿಳಿಸಿದ್ದಾರೆ.























