2026ರ ಐಪಿಎಲ್ ಅಖಾಡದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಧಿಕಾರಯುತ ಜಯ ಸಾಧಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಗೆಲುವಿನ ನಂತರ ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೈಯಲ್ಲಿ ಹಳದಿ ಸೀಟಿಯನ್ನು ಹಿಡಿದು “ನಂನ್ರಿ ಚೆನ್ನೈ” (ಧನ್ಯವಾದ ಚೆನ್ನೈ) ಎಂದು ಗಿಲ್ ಬರೆದುಕೊಂಡಿರುವುದು ಸಿಎಸ್‌ಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರೂ, ಗಿಲ್ ಅವರ ಈ ತಮಾಷೆಯ ನಡೆ ಕ್ರೀಡಾಭಿಮಾನಿಗಳಲ್ಲಿ ನಗು ಮೂಡಿಸಿದೆ.
ಚೆನ್ನೈನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡವನ್ನು ಕೇವಲ 158 ರನ್‌ಗಳಿಗೆ ನಿಯಂತ್ರಿಸುವಲ್ಲಿ ಗುಜರಾತ್ ಬೌಲರ್‌ಗಳು ಯಶಸ್ವಿಯಾದರು. ಗುಜರಾತ್ ಪರ ಕಗಿಸೊ ರಬಾಡ 25 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಗುರಿಯನ್ನು ಬೆನ್ನತ್ತಿದ ಗುಜರಾತ್ ತಂಡಕ್ಕೆ ಸಾಯಿ ಸುದರ್ಶನ್ ಆಸರೆಯಾದರು. ಕೇವಲ 46 ಎಸೆತಗಳಲ್ಲಿ 87 ರನ್ ಚಚ್ಚಿದ ಸುದರ್ಶನ್ ಜಯದ ಹಾದಿಯನ್ನು ಸುಗಮಗೊಳಿಸಿದರೆ, ನಾಯಕ ಗಿಲ್ 33 ಮತ್ತು ಜೋಸ್ ಬಟ್ಲರ್ ಅಜೇಯ 39 ರನ್ ಗಳಿಸಿ ತಂಡವನ್ನು ಸುಲಭವಾಗಿ ಗುರಿ ಮುಟ್ಟಿಸಿದರು.
ಪಂದ್ಯದ ನಂತರ ಮಾತನಾಡಿದ ಗಿಲ್, “ಭಾರತದ ಈ ಭಾಗದಲ್ಲಿ ಈ ರೀತಿಯ ಗೆಲುವು ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ಕೊನೆಯ ನಾಲ್ಕೈದು ಓವರ್‌ಗಳನ್ನು ಹೊರತುಪಡಿಸಿದರೆ ಇದು ನಮ್ಮ ತಂಡದ ಅತ್ಯುತ್ತಮ ಪ್ರದರ್ಶನ. ಆದರೆ ನಾವು ಇನ್ನಿಂಗ್ಸ್ ಮುಗಿಸುವ ಕಲೆಯಲ್ಲಿ ಇನ್ನು ಸ್ವಲ್ಪ ಸುಧಾರಿಸಿಕೊಳ್ಳಬೇಕಿದೆ” ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಅಲ್ಲದೆ ಟಾಸ್ ಸಮಯದಲ್ಲಿ ತಮಗೆ ಸ್ವಲ್ಪ ಗೊಂದಲವಿತ್ತು ಎಂದು ಹೇಳಿದ ಗಿಲ್, ಕೊನೆಗೆ ಬೌಲಿಂಗ್ ಆಯ್ದುಕೊಂಡಿದ್ದು ಸರಿಯಾದ ನಿರ್ಧಾರವಾಗಿತ್ತು ಎಂದರು. ಶಿವಂ ದುಬೆ ಬ್ಯಾಟಿಂಗ್‌ಗೆ ಬಂದಾಗ ವಾಷಿಂಗ್ಟನ್ ಸುಂದರ್ ಅವರನ್ನ ಬೌಲಿಂಗ್‌ಗೆ ಇಳಿಸುವ ಬಗ್ಗೆ ಯೋಚಿಸಿದ್ದೆ, ಆದರೆ ಪಂದ್ಯ ನಮ್ಮ ಕೈಯಲ್ಲಿದ್ದ ಕಾರಣ ಆ ನಿರ್ಧಾರ ಕೈಬಿಟ್ಟೆ ಎಂದು ತಮ್ಮ ರಣತಂತ್ರವನ್ನು ವಿವರಿಸಿದರು.
ಮತ್ತೊಂದೆಡೆ ಸೋಲಿನ ಬಗ್ಗೆ ಮಾತನಾಡಿದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್, ಚೆನ್ನೈನ ಪಿಚ್ ಬ್ಯಾಟಿಂಗ್‌ಗೆ ಸ್ವಲ್ಪ ಸವಾಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು. “ಮೊದಲ ಇನ್ನಿಂಗ್ಸ್‌ನಲ್ಲಿ ಪಿಚ್ ವರ್ತನೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಯಿತು. ಬೌನ್ಸ್ ಏರುಪೇರಾಗುತ್ತಿತ್ತು ಮತ್ತು ಮೀಡಿಯಂ ವೇಗಿಗಳಿಗೆ ಪಿಚ್ ಸಹಾಯ ಮಾಡುತ್ತಿತ್ತು. ನಾವು ಪರಿಸ್ಥಿತಿಗೆ ಹೊಂದಿಕೊಳ್ಳುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು” ಎಂದು ಅವರು ಸೋಲನ್ನು ಒಪ್ಪಿಕೊಂಡರು. ಒಟ್ಟಾರೆಯಾಗಿ, ಗುಜರಾತ್ ತನ್ನ ಸಂಘಟಿತ ಪ್ರದರ್ಶನದಿಂದ 2026ರ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ.























