ಐಪಿಎಲ್ 19ನೇ ಸೀಸನ್‌ನ ಏಪ್ರಿಲ್ 26ರ ಭಾನುವಾರ ಒಂದು ಅದ್ಭುತ ಡಬಲ್ ಹೆಡರ್ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ದಿನದ ಮೊದಲ ಪಂದ್ಯದಲ್ಲಿ ಐಪಿಎಲ್‌ನ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದ್ದವು. ಎರಡೂ ತಂಡಗಳಿಗೆ ಇದು ಸೀಸನ್‌ನ ಎಂಟನೇ ಪಂದ್ಯವಾಗಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಮುಂದುವರಿಯಲು ಈ ಗೆಲುವು ಅತೀ ಅವಶ್ಯಕವಾಗಿತ್ತು.
ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ಮೊದಲು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಪರ ನಾಯಕ ರುತುರಾಜ್ ಗಾಯಕ್ವಾಡ್ ಎರಡು ಭರ್ಜರಿ ಬೌಂಡರಿಗಳೊಂದಿಗೆ ಭರವಸೆಯ ಆರಂಭ ನೀಡಿದರು. ಆದರೆ ಗುಜರಾತ್ ಬೌಲರ್‌ಗಳ ನಿಖರ ದಾಳಿಯಿಂದಾಗಿ ಚೆನ್ನೈ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 11 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರೆ, ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಖಾತೆ ತೆರೆಯುವ ಮೊದಲೇ ಮೊಹಮ್ಮದ್ ಸಿರಾಜ್ ಬಲೆಗೆ ಬಿದ್ದರು. ಇದರಿಂದಾಗಿ ಸಿಎಸ್‌ಕೆ ಕೇವಲ 26 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತತ್ತರಿಸಿತು.
ಇದನ್ನು ಓದಿ: http://IPL 2026: ರುತುರಾಜ್ ಏಕಾಂಗಿ ಹೋರಾಟ, ಟೈಟನ್ಸ್‌ಗೆ 159 ರನ್ ಗುರಿ
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ನಾಯಕ ರುತುರಾಜ್ ಗಾಯಕ್ವಾಡ್ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಅವರಿಗೆ ಶಿವಂ ದುಬೆ ಮತ್ತು ನಂತರ ಬಂದ ಕಾರ್ತಿಕ್ ಶರ್ಮಾ ಸಾಥ್ ನೀಡಲು ಪ್ರಯತ್ನಿಸಿದರು. ರುತುರಾಜ್ ಗಾಯಕ್ವಾಡ್ 49 ಎಸೆತಗಳಲ್ಲಿ ತಮ್ಮ ಜವಾಬ್ದಾರಿಯುತ ಅರ್ಧಶತಕ ಪೂರೈಸಿದರು. ಕೊನೆಯ ಹಂತದಲ್ಲಿ ಜೇಮಿ ಓವರ್ಟನ್ ಮಿಂಚಿನ 18 ರನ್ ಸೇರಿಸಿದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ರುತುರಾಜ್ ಗಾಯಕ್ವಾಡ್ 60 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ತಂದುಕೊಟ್ಟರು.
159 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಸ್ಫೋಟಕ ಆರಂಭ ಪಡೆಯಿತು. ಕೇವಲ 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದ ಜಿಟಿ ತಂಡ ಜಯದ ಹಾದಿಯನ್ನು ಸುಗಮಗೊಳಿಸಿಕೊಂಡಿತು. ನಾಯಕ ಶುಭಮನ್ ಗಿಲ್ 33 ರನ್ ಗಳಿಸಿ ಸ್ಟಂಪ್ ಔಟ್ ಆಗುವ ಮೂಲಕ ಮೊದಲ ವಿಕೆಟ್ ಪತನಗೊಂಡಿತು. ಆದರೆ, ಸಾಯಿ ಸುದರ್ಶನ್ ಅಚಲವಾಗಿ ನಿಂತು ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಗುಜರಾತ್ ಟೈಟಾನ್ಸ್ 8 ಓವರ್‌ಗಳಲ್ಲಿ 1 ವಿಕೆಟ್‌ಗೆ 69 ರನ್ ಗಳಿಸಿದೆ. ಗೆಲ್ಲಲು 72 ಎಸೆತಗಳಲ್ಲಿ 90 ರನ್ ಗಳಿಸಬೇಕಾಗಿದೆ. ಸಾಯಿ ಸುದರ್ಶನ್ 32 ಮತ್ತು ಜೋಸ್ ಬಟ್ಲರ್ 3 ರನ್ ಗಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಗುಜರಾತ್ ಟೈಟಾನ್ಸ್ ಭದ್ರವಾದ ಸ್ಥಿತಿಯಲ್ಲಿದ್ದು, ಚೆನ್ನೈ ಬೌಲರ್‌ಗಳು ಪವಾಡ ಮಾಡಿದರೆ ಮಾತ್ರ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಳ್ಳಲು ಸಾಧ್ಯವಿದೆ. ಇಂದಿನ ಈ ಪಂದ್ಯದಲ್ಲಿ ಗೆಲುವಿನ ಪತಾಕೆ ಯಾರು ಹರಿಸಲಿದ್ದಾರೆ ಎನ್ನುವುದನ್ನು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ.























