ಬೆಂಗಳೂರು: ರಾಜ್ಯದಲ್ಲಿ ಬಿರು ಬೇಸಿಗೆ ತೀವ್ರವಾಗುತ್ತಿದ್ದಂತೆ ಜನರು ತಂಪು ಪಾನೀಯಗಳತ್ತ ಮುಖ ಮಾಡುತ್ತಿರುವಾಗ, ಮದ್ಯಪ್ರಿಯರು ‘ಕೋಲ್ಡ್ ಬಿಯರ್’ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ತಾಪಮಾನ ಏರಿಕೆಗೆ ಅನುಗುಣವಾಗಿ ಬಿಯರ್ ಮಾರಾಟ ಭಾರೀ ಏರಿಕೆಯಾಗಿದ್ದು, ಏಪ್ರಿಲ್ ಮೊದಲ 16 ದಿನಗಳಲ್ಲೇ ದಾಖಲೆ ಮಟ್ಟ ತಲುಪಿದೆ.
ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಏಪ್ರಿಲ್ 1ರಿಂದ 16ರವರೆಗೆ 128.23 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ 146.48 ಲಕ್ಷ ಲೀಟರ್ ಮಾರಾಟವಾಗಿದೆ. ಅಂದರೆ 18.25 ಲಕ್ಷ ಲೀಟರ್ ಹೆಚ್ಚಳವಾಗಿದ್ದು, ಶೇ.15ರಷ್ಟು ಏರಿಕೆ ದಾಖಲಾಗಿದೆ.
ಬೇಡಿಕೆ ಏರಿಕೆಯ ಪ್ರಮುಖ ಕಾರಣಗಳು: ತೀವ್ರ ಬೇಸಿಗೆ ಮತ್ತು ತಾಪಮಾನ ಏರಿಕೆ, ಸಾಲು ಸಾಲು ರಜೆಗಳು, ಗ್ರಾಮೀಣ ಭಾಗಗಳಲ್ಲಿ ಜಾತ್ರೆ, ಹಬ್ಬಗಳ ಸೀಸನ್‌ಗಳ ಭರಾಟೆ, ಅಬಕಾರಿ ಇಲಾಖೆ ಅಧಿಕಾರಿಗಳ ಪ್ರಕಾರ, “ಹವಾಮಾನ ಬದಲಾವಣೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಬಿಯರ್ ಬೇಡಿಕೆಯನ್ನು ಹೆಚ್ಚಿಸುತ್ತಿವೆ. ಗ್ರಾಹಕರಿಗೆ ಹಲವು ಆಯ್ಕೆಗಳಿರುವುದರಿಂದ ಮಾರಾಟ ಏರಿಕೆಯಾಗುತ್ತಿದೆ” ಎಂದು ತಿಳಿಸಿದ್ದಾರೆ.
ದೇಶೀಯ ಮದ್ಯಕ್ಕೂ ಬೇಡಿಕೆ: ಬಿಯರ್ ಮಾರಾಟ ಹೆಚ್ಚಳದ ನಡುವೆಯೂ IMFL (ಭಾರತೀಯ ತಯಾರಿತ ವಿದೇಶಿ ಮದ್ಯ) ಪ್ರಾಬಲ್ಯ ಮುಂದುವರಿದಿದೆ. ಕಳೆದ ವರ್ಷ: 207.36 ಲಕ್ಷ ಲೀಟರ್, ಈ ವರ್ಷ: 216.77 ಲಕ್ಷ ಲೀಟರ್, ಏರಿಕೆ: 9.41 ಲಕ್ಷ ಲೀಟರ್ (ಶೇ. 4.54)ಬ್ರಾಂಡಿ, ವಿಸ್ಕಿ, ರಮ್, ಜಿನ್ ಮುಂತಾದ ಮದ್ಯಗಳಿಗೂ ಬೇಡಿಕೆ ಕಡಿಮೆಯಾಗಿಲ್ಲ.
ದರ ಏರಿದರೂ ಖರೀದಿ ಕಡಿಮೆಯಾಗಿಲ್ಲ : ರಾಜ್ಯ ಸರ್ಕಾರವು ಅಬಕಾರಿ ಆದಾಯ ಗುರಿಯನ್ನು ₹45,000 ಕೋಟಿಗೆ ಹೆಚ್ಚಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ಮದ್ಯದ ಮೇಲಿನ ತೆರಿಗೆಗಳನ್ನು ಹಲವು ಬಾರಿ ಹೆಚ್ಚಿಸಿದೆ. ಇದರಿಂದ ಬಿಯರ್ ಹಾಗೂ ಇತರೆ ಮದ್ಯಗಳ ಬೆಲೆ ಏರಿಕೆಯಾದರೂ, ಖರೀದಿಯಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ.
ನಗರಗಳಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲಿಯೂ ಚಿಲ್ಲ್ಡ್ ಬಿಯರ್ ಬೇಡಿಕೆ ಹೆಚ್ಚಳವಾಗಿದ್ದು, ಬೇಸಿಗೆ ಮುಂದುವರಿದಂತೆ ಇನ್ನಷ್ಟು ಮಾರಾಟ ಏರಿಕೆಯ ಸಾಧ್ಯತೆಯಿಂದಾಗಿ ಅಬಕಾರಿ ಇಲಾಖೆಯ ಆದಾಯ ಗುರಿ ಈ ವರ್ಷ ಮೀರಬಹುದೆಂಬ ನಿರೀಕ್ಷೆ ಇದ್ದು ಒಟ್ಟಿನಲ್ಲಿ, ಬೇಸಿಗೆ ಬಿಸಿಲು ಮದ್ಯ ಮಾರುಕಟ್ಟೆಗೆ ‘ಹಾಟ್ ಸೀಸನ್’ ಆಗಿದ್ದು, ಸರ್ಕಾರದ ಬೊಕ್ಕಸಕ್ಕೂ ದೊಡ್ಡ ಲಾಭ ತಂದುಕೊಡುತ್ತಿದೆ.





















