Home Advertisement
Home ಸುದ್ದಿ ವಿದೇಶ ಸುಂದರ ಪತ್ನಿ, 1 ಬಿಲಿಯನ್ ಡಾಲರ್.. ಟರ್ಕಿಗೆ ಉಗಾಂಡ ಅಧ್ಯಕ್ಷ ಪುತ್ರನ ವಿಚಿತ್ರ ಬೇಡಿಕೆ; 30...

ಸುಂದರ ಪತ್ನಿ, 1 ಬಿಲಿಯನ್ ಡಾಲರ್.. ಟರ್ಕಿಗೆ ಉಗಾಂಡ ಅಧ್ಯಕ್ಷ ಪುತ್ರನ ವಿಚಿತ್ರ ಬೇಡಿಕೆ; 30 ದಿನಗಳ ಡೆಡ್‌ಲೈನ್‌!

0
25

ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೇನಿ ಅವರ ಪುತ್ರ ಮತ್ತು ಅಲ್ಲಿನ ಸೇನಾ ಮುಖ್ಯಸ್ಥರಾದ ಮುಹೂಜಿ ಕೈನೆರುಗಾಬಾ ಅವರು ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈ ಬಾರಿ ಅವರು ಗುರಿ ಮಾಡಿರುವುದು ಬಲಿಷ್ಠ ರಾಷ್ಟ್ರ ಟರ್ಕಿಯನ್ನು. ಮುಹೂಜಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳು ಕೇವಲ ರಾಜತಾಂತ್ರಿಕ ಸಂಘರ್ಷಕ್ಕೆ ನಾಂದಿ ಹಾಡಿಲ್ಲದೆ, ಇಡೀ ವಿಶ್ವವೇ ಹುಬ್ಬೇರಿಸುವಂತೆ ಮಾಡಿದೆ.

ಅವರ ಈ ಆಕ್ರೋಶಕ್ಕೆ ಮುಖ್ಯ ಕಾರಣ ಹಣ ಮತ್ತು ಗೌರವ. ಸೋಮಾಲಿಯಾದಲ್ಲಿ ಶಾಂತಿ ಸ್ಥಾಪನೆಗಾಗಿ ಉಗಾಂಡಾ ಕಳೆದ ಎರಡು ದಶಕಗಳಿಂದ ತನ್ನ ಸೈನಿಕರನ್ನು ನಿಯೋಜಿಸಿ ರಕ್ತ ಹರಿಸುತ್ತಿದೆ. ಆದರೆ, ಅಲ್ಲಿನ ಬಂದರು ಮತ್ತು ವಿಮಾನ ನಿಲ್ದಾಣಗಳಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳ ಮೂಲಕ ಟರ್ಕಿ ದೇಶವು ಲಾಭ ಮಾಡಿಕೊಳ್ಳುತ್ತಿದೆ ಎಂಬುದು ಮುಹೂಜಿ ಅವರ ಗಂಭೀರ ಆರೋಪ. “ನಮ್ಮ ಶ್ರಮಕ್ಕೆ ಟರ್ಕಿ ಲಾಭ ಪಡೆಯುತ್ತಿದೆ” ಎಂದು ಕಿಡಿಕಾರಿರುವ ಅವರು, ಇದಕ್ಕೆ ಪ್ರತಿಯಾಗಿ ಟರ್ಕಿಯು ಉಗಾಂಡಾಗೆ ಒಂದು ಬಿಲಿಯನ್ ಡಾಲರನ್ನು ‘ಭದ್ರತಾ ಲಾಭಾಂಶ’ವಾಗಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಆದರೆ ವಿಷಯ ಇಲ್ಲಿಗೆ ನಿಲ್ಲುವುದಿಲ್ಲ. ಹಣದ ಬೇಡಿಕೆಯ ಜೊತೆಗೆ ಅವರು ಅತ್ಯಂತ ವಿಚಿತ್ರವಾದ ಷರತ್ತೊಂದನ್ನು ವಿಧಿಸಿದ್ದಾರೆ. ಟರ್ಕಿ ದೇಶವು ತನ್ನಲ್ಲಿರುವ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಒಪ್ಪಿಸಬೇಕು ಮತ್ತು ತಾನು ಆಕೆಯನ್ನು ಮದುವೆಯಾಗುವುದಾಗಿ ಅವರು ಘೋಷಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸಲು ಅವರು ಟರ್ಕಿಗೆ ಕೇವಲ 30 ದಿನಗಳ ಗಡುವು ನೀಡಿದ್ದಾರೆ. ಒಂದು ವೇಳೆ ಟರ್ಕಿ ಇದಕ್ಕೆ ಒಪ್ಪದಿದ್ದರೆ, ರಾಜಧಾನಿ ಕಂಪಾಲಾದಲ್ಲಿರುವ ಟರ್ಕಿ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ತಮ್ಮ ದೇಶದ ಜನರಿಗೆ ಟರ್ಕಿಗೆ ಪ್ರಯಾಣಿಸದಂತೆಯೂ ಅವರು ಸಲಹೆ ನೀಡಿದ್ದಾರೆ.

ಈ ಅಚ್ಚರಿಯ ಹೇಳಿಕೆಗಳ ನಡುವೆಯೇ ಅವರು ಇಸ್ರೇಲ್ ಪರವಾಗಿಯೂ ಧ್ವನಿ ಎತ್ತಿದ್ದಾರೆ. ಯೇಸುಕ್ರಿಸ್ತನ ಪವಿತ್ರ ಭೂಮಿಯನ್ನು ರಕ್ಷಿಸಲು ತಮ್ಮ ನೇತೃತ್ವದಲ್ಲಿ ಒಂದು ಲಕ್ಷ ಸೈನಿಕರನ್ನು ಕಳುಹಿಸಲು ತಾವು ಸಿದ್ಧ ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ವಾಸ್ತವವಾಗಿ ಮೊಹೂಜಿ ಅವರಿಗೆ ಇಂತಹ ವಿವಾದಗಳು ಹೊಸದೇನಲ್ಲ. ಈ ಹಿಂದೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನೇ ಮದುವೆಯಾಗಲು 100 ಹಸುಗಳನ್ನು ನೀಡುವುದಾಗಿ ಹೇಳಿ ಸುದ್ದಿಯಾಗಿದ್ದರು. ಈಗ ಟರ್ಕಿ ವಿರುದ್ಧ ಅವರು ತಳೆದಿರುವ ಈ ಕಠಿಣ ಮತ್ತು ವಿಚಿತ್ರ ನಿಲುವು ಕೇವಲ ಸೋಶಿಯಲ್ ಮೀಡಿಯಾ ನಾಟಕವೋ ಅಥವಾ ಉಗಾಂಡಾದ ವಿದೇಶಾಂಗ ನೀತಿಯಲ್ಲಿ ಆಗಲಿರುವ ದೊಡ್ಡ ಬದಲಾವಣೆಯೋ ಎಂಬುದನ್ನು ಕಾದು ನೋಡಬೇಕಿದೆ. ಟರ್ಕಿ ಈ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.