ಜಗತ್ತಿನ ರಾಜತಾಂತ್ರಿಕ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಕುತೂಹಲಕಾರಿ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಈಗ ಸಂಪೂರ್ಣವಾಗಿ ಸಜ್ಜಾಗಿದೆ. ದಶಕಗಳ ಕಾಲ ಬದ್ಧ ವೈರಿಗಳಂತಿದ್ದ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ನಡೆಸಲು ವೇದಿಕೆ ಸಿದ್ಧವಾಗಿದ್ದು, ಇಡೀ ಜಗತ್ತಿನ ಕಣ್ಣು ಈಗ ಇಸ್ಲಾಮಾಬಾದ್ ಮೇಲೆ ನೆಟ್ಟಿದೆ. ಈಗಾಗಲೇ ಇರಾನ್‌ನ ಉನ್ನತ ಮಟ್ಟದ ನಿಯೋಗ ಇಸ್ಲಾಮಾಬಾದ್‌ಗೆ ಬಂದಿಳಿದಿದ್ದು, ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಈ ಹೈ-ಪ್ರೊಫೈಲ್ ಭೇಟಿಯ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದ್ದು, ನಗರದಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇರಾನ್ ನಿಯೋಗವು ಪಾಕ್ ವಾಯುನೆಲೆಗೆ ಆಗಮಿಸುತ್ತಿದ್ದಂತೆ ಪಾಕಿಸ್ತಾನಿ ಸೇನೆಯು ವಿಶೇಷ ಭದ್ರತೆಯೊಂದಿಗೆ ಅವರನ್ನು ಎಸ್ಕಾರ್ಟ್ ಮಾಡಿರುವುದು ಸಭೆಯ ಗಾಂಭೀರ್ಯತೆಯನ್ನು ಎತ್ತಿ ತೋರಿಸುತ್ತಿದೆ.

ಆದರೆ ಈ ಮಹತ್ವದ ಸಭೆ ನಡೆಯುವ ಬಗ್ಗೆ ಇನ್ನೂ ಗೊಂದಲದ ಮೋಡಗಳು ಕವಿದಿವೆ. ಲೆಬನಾನ್ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಇರಾನ್, ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂಬ ಸುಳಿವನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಇರಾನ್ ಪರವಾಗಿ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಭಾಗವಹಿಸಬಹುದು ಎಂಬ ನಿರೀಕ್ಷೆಯಿದ್ದರೂ, ಇರಾನ್ ಮಾಧ್ಯಮಗಳು ಮಾತ್ರ ಸಭೆಗೆ ಯಾರೂ ಹೋಗಿಲ್ಲ ಎಂಬ ಭಿನ್ನ ವರದಿಗಳನ್ನು ನೀಡುತ್ತಿವೆ. ಈ ನಡುವೆ ಇರಾನ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಎರಡು ಕಠಿಣ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಮಾತುಕತೆ ಆರಂಭವಾಗುವ ಮುನ್ನ ಲೆಬನಾನ್‌ನಲ್ಲಿ ಕದನ ವಿರಾಮವಾಗಬೇಕು ಮತ್ತು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್‌ನ ಹಣಕಾಸಿನ ಸ್ವತ್ತುಗಳನ್ನು ಬಿಡುಗಡೆ ಮಾಡಬೇಕು ಎಂಬುದು ಇರಾನ್‌ನ ಕಟ್ಟುನಿಟ್ಟಿನ ಪಟ್ಟು.
ಮತ್ತೊಂದೆಡೆ, ಅಮೆರಿಕ ಈ ಮಾತುಕತೆಯನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಗಂಭೀರವಾಗಿ ಪರಿಗಣಿಸಿದೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಮಾತುಕತೆಯು ಸಕಾರಾತ್ಮಕವಾಗಿರುವ ಬಗ್ಗೆ ಆಶಾವಾದ ವ್ಯಕ್ತಪಡಿಸುತ್ತಲೇ, ಒಂದು ವೇಳೆ ಇರಾನ್ ಏನಾದರೂ ಅಮೆರಿಕದ ಜೊತೆ ಆಟವಾಡಲು ಮುಂದಾದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ನೇರವಾಗಿಯೇ ಎಚ್ಚರಿಸಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಇರಾನ್‌ಗೆ ಕಟು ಎಚ್ಚರಿಕೆ ನೀಡಿದ್ದು, ಜಗತ್ತನ್ನು ಬ್ಲ್ಯಾಕ್‌ಮೇಲ್ ಮಾಡುವ ತಂತ್ರಕ್ಕೆ ಬ್ರೇಕ್ ಹಾಕುವ ಸೂಚನೆ ನೀಡಿದ್ದಾರೆ. “ಇರಾನಿಯನ್ನರು ಜೀವಂತವಾಗಿರುವುದಕ್ಕೆ ಸಂಧಾನವೊಂದೇ ದಾರಿ” ಎಂದು ಹೇಳುವ ಮೂಲಕ ಟ್ರಂಪ್ ಅವರು ಇರಾನ್ ಮೇಲೆ ಭಾರೀ ಒತ್ತಡ ಹೇರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಈ ಶಾಂತಿ ಮಾತುಕತೆಯನ್ನು ಜಾಗತಿಕ ರಾಜಕೀಯದ ಅತ್ಯಂತ ನಿರ್ಣಾಯಕ ಘಟ್ಟವನ್ನಾಗಿ ಮಾಡಿದೆ. ಇರಾನ್ ತನ್ನ ಷರತ್ತುಗಳಿಗೆ ಬದ್ಧವಾಗಿರುತ್ತ ಅಥವಾ ಅಮೆರಿಕದ ಎಚ್ಚರಿಕೆಗೆ ಬಗ್ಗುತ್ತಾ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.






















