“ಧರಿತ್ರಿ ಘಳಿಗೆ”: ಮಾರ್ಚ್ 28 ರಂದು ಒಂದು ಗಂಟೆ ದೀಪ ಆರಿಸಲು ಸಚಿವ ಈಶ್ವರ ಖಂಡ್ರೆ ಕರೆ.
ಬೆಂಗಳೂರು: ಜಾಗತಿಕ ಪರಿಸರ ಸಂರಕ್ಷಣೆಯ ಪ್ರಮುಖ ಚಳವಳಿಯಾದ “ಅರ್ಥ್ ಅವರ್” (ಭೂಮಿಗಾಗಿ ಒಂದು ಗಂಟೆ) ಅಂಗವಾಗಿ ಈ ಬಾರಿ ಮಾರ್ಚ್ 28, 2026ರಂದು ರಾತ್ರಿ 8:30 ರಿಂದ 9:30ರವರೆಗೆ ಒಂದು ಗಂಟೆ ಅನಗತ್ಯ ವಿದ್ಯುತ್ ದೀಪಗಳನ್ನು ಆಫ್ ಮಾಡುವ ಮೂಲಕ ಭೂಮಿಯ ರಕ್ಷಣೆಗೆ ಕೈಜೋಡಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಸಚಿವರು ತಮ್ಮ ಕಳಕಳಿಯ ಸಂದೇಶದಲ್ಲಿ, ಇದು ಕೇವಲ ಒಂದು ಗಂಟೆಯ ಕತ್ತಲೆ ಅಲ್ಲ, ಭೂಮಿಯ ಭವಿಷ್ಯಕ್ಕಾಗಿ ನಮ್ಮ ಬದ್ಧತೆಯನ್ನು ವ್ಯಕ್ತಪಡಿಸುವ ಸಂಕೇತವಾಗಿದೆ ಎಂದು ಹೇಳಿದ್ದಾರೆ.
(ಭೂಮಿಗಾಗಿ ಒಂದು ಗಂಟೆ) Earth Hour ಎಂದರೇನು? : “ಅರ್ಥ್ ಅವರ್” ಎನ್ನುವುದು World Wide Fund for Nature (WWF) ಆಯೋಜಿಸುವ ಜಾಗತಿಕ ಪರಿಸರ ಚಳವಳಿಯಾಗಿದ್ದು, ಪ್ರತಿ ವರ್ಷ ಮಾರ್ಚ್ ತಿಂಗಳ ಕೊನೆಯ ಶನಿವಾರ ರಾತ್ರಿ ಒಂದು ಗಂಟೆ ಅನಗತ್ಯ ದೀಪಗಳನ್ನು ಆರಿಸುವ ಮೂಲಕ ಹವಾಮಾನ ಬದಲಾವಣೆ ಮತ್ತು ಶಕ್ತಿ ಉಳಿತಾಯದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಅಭಿಯಾನದ ಆರಂಭ: 2007ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಪ್ರಾರಂಭವಾದ ಈ ಅಭಿಯಾನ, ಇಂದು 190ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರನ್ನು ಒಂದಾಗಿಸುವ ವಿಶ್ವಮಟ್ಟದ ಚಳವಳಿಯಾಗಿದೆ.
ಈಶ್ವರ ಖಂಡ್ರೆ ಮನವಿ : ಸಚಿವ ಈಶ್ವರ ಬಿ ಖಂಡ್ರೆ ಅವರು ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ಜನತೆಗೆ ಕರೆ ನೀಡಿದ್ದು ಮನೆ, ಕಚೇರಿ, ವ್ಯಾಪಾರ ಸಂಸ್ಥೆಗಳಲ್ಲಿ ಅನಗತ್ಯ ದೀಪಗಳನ್ನು ಆರಿಸಿ, ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ಮುಂದಿನ ಪೀಳಿಗೆಗಾಗಿ ಹಸಿರು ಭವಿಷ್ಯ ನಿರ್ಮಿಸಲು ಕೈಜೋಡಿಸಿ ಎಂದಿದ್ದಾರೆ. “ನಾನು ಈ ಆಂದೋಲನದಲ್ಲಿ ಭಾಗವಹಿಸುತ್ತಿದ್ದೇನೆ. ನಿಮ್ಮೆಲ್ಲರೂ ಸಹ ಈ ಜಾಗತಿಕ ಚಳವಳಿಗೆ ಕೈಜೋಡಿಸಿ,” ಎಂದು ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಅರ್ಥ್ ಅವರ್‌ನ್ನು ಹೆಚ್ಚು ಪರಿಣಾಮಕಾರಿಯಾಗಿ ಆಚರಿಸಲು ಅರಣ್ಯ ಇಲಾಖೆ ಹಾಗೂ ವಿವಿಧ ಪರಿಸರ ಸಂಘಟನೆಗಳು ವಿಶೇಷ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುತ್ತಿವೆ. ಶಾಲೆಗಳು, ಕಾಲೇಜುಗಳು ಮತ್ತು ಐಟಿ ಕಂಪನಿಗಳಲ್ಲೂ ಪರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಕೆಲವು ಪ್ರಮುಖ ಸರ್ಕಾರಿ ಕಟ್ಟಡಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಸಹ ದೀಪ ನಂದಿಸುವ ಮೂಲಕ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಲು ಸಿದ್ಧತೆ ನಡೆಸಲಾಗಿದೆ.
ಏಕೆ ಅರ್ಥ್ ಅವರ್ ಮುಖ್ಯ? : ಹವಾಮಾನ ಬದಲಾವಣೆಯ ವಿರುದ್ಧ ಜಾಗೃತಿ, ಶಕ್ತಿ ಉಳಿತಾಯದ ಮಹತ್ವ ಅರಿವು, ಜಾಗತಿಕ ಒಗ್ಗಟ್ಟು ಮತ್ತು ಪರಿಸರ ಕಾಳಜಿ, ಭವಿಷ್ಯದ ಪೀಳಿಗೆಗಾಗಿ ಸಂರಕ್ಷಣೆಯ ಸಂದೇಶದ ಮೂಲಕ ಬೆಂಬಲವನ್ನು ಸೂಚಿಸುವದಾಗಿದೆ.





















