15-20 ವರ್ಷ ಸೇವೆ ಸಲ್ಲಿಸಿದ್ದರೂ ಕೆಲಸದಿಂದ ವಜಾ
ಮಾಲತೇಶ ಹೂಲಿಹಳ್ಳಿ
ಸಂ.ಕ.ಸಮಾಚಾರ, ಹುಬ್ಬಳ್ಳಿ: ಅವರೆಲ್ಲ ಸುಮಾರು 10, 15, 20 ವರ್ಷ ಕಾಲ ಅತಿಥಿ ಉಪನ್ಯಾಸಕರಾಗಿ ಕಡಿಮೆ ವೇತನದಲ್ಲಿಯೇ ಸೇವೆ ಸಲ್ಲಿಸಿದವರು. ಆದರೆ ಯುಜಿಸಿ ಮಾನ ದಂಡಗಳ ಕಾರಣದಿಂದ ಇಂದು ಕೆಲಸವಿಲ್ಲದೆ, ಕೈಯಲ್ಲಿ ಕಾಸೂ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ಪರಿಸ್ಥಿತಿ ನಿಭಾಯಿಸಲಾಗದೆ ಸರಕಾರದ ಮುಂದೆ ನಮಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿರುವ ಇವರಿಗೆ ಸಿಕ್ಕಿರುವುದು ಕೇವಲ ಭರವಸೆ ಮಾತ್ರ.
ರಾಜ್ಯದ 430 ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ 6600 ಜನರ ಪರಿಸ್ಥಿತಿ ಇದು. ಬಾಡಿಗೆ ಮನೆ ನಿರ್ವಹಣೆ ಮಾಡುವುದಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ನೆಟ್, ಸೆಟ್, ಪಿಎಚ್‌ಡಿ ಇರದ ಕಾರಣಕ್ಕೆ ಪದವಿ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಹುದ್ದೆಯಿಂದ ಇವರೆಲ್ಲ ಈಗ ಹೊರಬಿದ್ದಿದ್ದು, ಸರ್ಕಾರದಿಂದ ಏನಾದರೂ ಸಹಾಯ ಸಿಗುವ ಆಶಾವಾದದಲ್ಲಿ ದಿನ ದೂಡುತ್ತಿದ್ದಾರೆ.
ರಾಜ್ಯದ 430 ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 6,600 ಅತಿಥಿ ಉಪನ್ಯಾಸಕರಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ನೆಟ್, ಸೆಟ್, ಪಿಎಚ್‌ಡಿ ಮಾಡಿಕೊಳ್ಳುವಂತೆ ಆದೇಶ ಮಾಡಲಾಯಿತು. ಈ ಸಮಯದಲ್ಲಿ ಹಳೆಯ ಪಠ್ಯಕ್ರಮದಲ್ಲಿ ಅಧ್ಯಯನ ಮಾಡಿದ ಶಿಕ್ಷಕರಿಗೆ, ಈಗಿನ ಪಠ್ಯಕ್ರಮಕ್ಕೆ ಹೊಂದಾಣಿಕೆಯಾಗದ ಕಾರಣ ಇದರಿಂದ ವಂಚಿತರಾದರು.
ಹೀಗಾಗಿ ಯುಜಿಸಿ ಮಾನದಂಡದ ಸರಕಾರದ ಆದೇಶದಂತೆ, ಇನ್ನೂ ಸೆಮಿಸ್ಟರ್ ಇರುವಾಗಲೇ ಡಿಸೆಂಬರ್ 8, 2025ರಲ್ಲಿ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ನಂತರ ನ್ಯಾಯಾಲಯದಲ್ಲಿ ಹೋರಾಟದ ನಂತರ ಯುಜಿಸಿ ಅರ್ಹತೆ ಪಡೆದವರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ನಾಲ್ಕು ಹಂತದ ಕೌನ್ಸೆಲಿಂಗ್ ನಡೆಸಿ 6600 ಜನರಲ್ಲಿ 2 ಸಾವಿರ ಅತಿಥಿ ಉಪನ್ಯಾಸಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಉಳಿದ 4 ಸಾವಿರಕ್ಕೂ ಹೆಚ್ಚು ಶಿಕ್ಷಕರು ಅತಂತ್ರರಾಗಿದ್ದಾರೆ.
ಹೋರಾಟ ಮಾಡಿದರೂ ಫಲವಿಲ್ಲ: ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಕೈ ಬಿಡದಂತೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಕಾನೂನು ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರದಲ್ಲಿ ಸಿಹಿ ಸುದ್ದಿ ನೀಡಲಾಗುವುದು ಎಂಬುದು ಬಿಟ್ಟರೆ ಬೇರೇನೂ ಭರವಸೆ ಸಿಕ್ಕಿಲ್ಲ.
ನಮಗೋಸ್ಕರ ಸರ್ಕಾರ ಬೇರೆ ವ್ಯವಸ್ಥೆ ಮಾಡಲಿ: ಅವೈಜ್ಞಾನಿಕವಾಗಿ ಕೌನ್ಸೆಲಿಂಗ್ ಮಾಡಲಾಗಿದೆ. ಇದರಿಂದ ಸುಮಾರು 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ನ್ಯಾಯ ಸಿಕ್ಕಿಲ್ಲ. ಸರಕಾರ ನಮಗಾಗಿ ಪರ್ಯಾಯ ವ್ಯವಸ್ಥೆ ಮಾಡಿ ಕೊಟ್ಟು ನ್ಯಾಯ ಒದಗಿಸಬೇಕು. ಈ ಕುರಿತು ಅನೇಕ ಸಲ ಹೋರಾಟ ಮಾಡಿದ್ದರೂ ಯಾವುದೇ ಭರವಸೆಯಾಗಲೀ, ಫಲವಾಗಲೀ ನಮಗೆ ಸಿಕ್ಕಿಲ್ಲ ಎಂದು ನೊಂದ ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಸಂಕಷ್ಟ್ ಹೇಳಿಕೊಂಡಿದ್ದಾರೆ






















