Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಹೊರತು ಯಾರೂ ಗೆದ್ದಿಲ್ಲ!

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಹೊರತು ಯಾರೂ ಗೆದ್ದಿಲ್ಲ!

0
143

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ.

2025ರ ಡಿಸೆಂಬರ್‌ 14 ರಂದು ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದು, ಸದ್ಯ ಉಪಚುನಾವಣೆಗೆ ಸಿದ್ಧತೆ ನಡೆದಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲ ಎದುರಾಳಿಗಳಾಗಿದ್ದು, ಅಭ್ಯರ್ಥಿಗಳ ಆಯ್ಕೆ ಎರಡರಲ್ಲೂ ಕಗ್ಗಂಟಾಗಿದೆ.

ಕಾಂಗ್ರೆಸ್‌ನ ಭದ್ರಕೋಟೆ ಎಂದೆನಿಸಿರುವ ದಾವಣಗೆರೆ ಕ್ಷೇತ್ರ 2008ರಲ್ಲಿ ಮರುವಿಂಗಡಣೆಯಾಯಿತು. ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳೆಂದು ವಿಂಗಡಣೆ ಮಾಡಲಾಯಿತು.

ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳೆಂದು ವಿಂಗಡಣೆಯಾಗುವ ಮುನ್ನ ದಾವಣಗೆರೆ ಕ್ಷೇತ್ರದಲ್ಲಿ ನಡೆದಂತಹ ಚುನಾವಣೆಗಳಲ್ಲಿ ಶಾಮನೂರು ಶಿವಶಂಕರಪ್ಪನವರು 1994 ಮತ್ತು 2004ರಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದರು.

2008ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ಸೃಷ್ಟಿಯಾದ ನಂತರ ಶಾಮನೂರು ಶಿವಶಂಕರಪ್ಪ ಮತ್ತೆ ತಮ್ಮ ಗೆಲುವಿನ ಓಟ ಮುಂದುವರಿಸಿದರು. ಇದುವರೆಗೂ ಅವರೇ ಆ ಕ್ಷೇತ್ರ ಶಾಸಕರಾಗಿ ಆಯ್ಕೆಯಾಗುತ್ತ ಬಂದಿದ್ದರು.

2008ರಲ್ಲಿ ಬಿಜೆಪಿ ಅಭ್ಯರ್ಥಿ ಯಶವಂತ್‌ ರಾವ್‌ ಜಾಧವ್‌ ಅವರ ವಿರುದ್ಧ 6,358 ಮತಗಳ ಅಂತರದಿಂದ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದರು.

2013ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕೆ ಸೈಯದ್‌ ಸೈಫುಲ್ಲಾ ಅವರನ್ನು 40,158 ಮತಗಳ ಅಂತರದಲ್ಲಿ ಸೋಲಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ 3ನೇ ಸ್ಥಾನವನ್ನು ಪಡೆದಿತ್ತು.

2018ರ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಸತತ ಮೂರನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಬಿಜೆಪಿಯ ಯಶವಂತ್‌ ರಾವ್‌ ಜಾಧವ್‌ ವಿರುದ್ಧ 15,884 ಮತಗಳ ಭರ್ಜರಿ ಜಯ ಸಾಧಿಸಿದರು.

2023ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಜಿ ಅಜಯಕುಮಾರ್‌ ವಿರುದ್ಧ 27,888 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಶಾಮನೂರು ಶಿವಶಂಕರಪ್ಪನವರು ದೇಶದಲ್ಲಿಯೇ ಅತ್ಯಂತ ಹಿರಿಯ ಶಾಸಕ ಎಂದೆನಿಸಿಕೊಂಡಿದ್ದರು.

ಹೀಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವಿಂಗಡಣೆಯ ಬಳಿಕ ಶಾಮನೂರು ಶಿವಶಂಕರಪ್ಪನವರೇ ಇಲ್ಲಿ ಶಾಸಕರಾಗಿ ಆಯ್ಕೆಯಾಗುತ್ತ ಬಂದಿದ್ದು ಇತಿಹಾಸ. ಸದ್ಯ ಈ ಬಾರಿ ಅವರ ನಿಧನದಿಂದಾಗಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದು ಯಾರಿಗೆ ಮತದಾರ ಒಲಿಯಲಿದ್ದಾನೆ ಎನ್ನುವುದನ್ನು ಕಾದುನೋಡಬೇಕಿದೆ.