ಬೆಳಗಾವಿ ಹನಿ ಟ್ರ್ಯಾಪ್ ಪ್ರಕರಣ: ಪ್ರಮುಖ ಆರೋಪಿಯ ಬಂಧನ, ಸಹಚರ ಪರಾರಿ
ಬೆಳಗಾವಿ: ನಗರದ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಹನಿ ಟ್ರ್ಯಾಪ್ ನಡೆಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ಫ್ಯಾಷನ್ ಡಿಸೈನರ್ ದೀಪಾ ಅವಟಗಿ (33) ಬಂಧಿತ ಆರೋಪಿಯಾಗಿದ್ದು, ಆಕೆಯ ಸಹಚರ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ.
ಈ ಪ್ರಕರಣವನ್ನು ಟಿಳಕವಾಡಿ ಪೊಲೀಸರು ಭೇದಿಸಿದ್ದು, ಆರೋಪಿಯ ವಿರುದ್ಧ ಹಲವು ಗಂಭೀರ ಆರೋಪಗಳು ಹೊರಬಂದಿವೆ.
ಸಾಮಾಜಿಕ ಜಾಲತಾಣದ ಮೂಲಕ ಬಲೆಗೆ : ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹುಕ್ಕೇರಿ ತಾಲೂಕಿನ ನಿವಾಸಿಯಾದ ಶಿವಾನಂದ ಮಠಪತಿ ನಗರದಲ್ಲಿನ ಶ್ರೀಮಂತ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ದೀಪಾ ಅವಟಗಿಗೆ ನೀಡುತ್ತಿದ್ದನು. ಬಳಿಕ ದೀಪಾ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಮೂಲಕ ಪರಿಚಯ ಬೆಳೆಸಿ ಆಕರ್ಷಕ ಮಾತುಕತೆ ನಡೆಸಿ ಅವರನ್ನು ತನ್ನ ಬಲೆಗೆ ಸೆಳೆಯುತ್ತಿದ್ದಳು.
ಪರಿಚಯ ಗಾಢವಾದ ನಂತರ ಅಶ್ಲೀಲ ಚಾಟ್ ನಡೆಸಿ, ಬಳಿಕ ಬೆಳಗಾವಿಯ ಲಾಡ್ಜ್‌ಗೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದಳು. ಲಾಡ್ಜ್‌ಗೆ ಬಂದ ವ್ಯಕ್ತಿಗೆ ಮೊದಲು ಸ್ನಾನ ಮಾಡಿ ಬರಲು ಹೇಳಿ, ಆತ ಬಾತ್‌ರೂಮ್‌ಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲು ಲಾಕ್ ಮಾಡಿ, ಆತನ ಮೊಬೈಲ್ ಫೋನ್, ಹಣ ಹಾಗೂ ಕಾರಿನ ಕೀಲಿಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದಳು.
ಹಣಕ್ಕಾಗಿ ಬೆದರಿಕೆ : ಬಾತ್‌ರೂಮ್‌ನಲ್ಲಿ ಸಿಲುಕಿದ್ದ ವ್ಯಕ್ತಿಗೆ ನಂತರ ಬೇರೆ ಸಂಖ್ಯೆಯಿಂದ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಪೊಲೀಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂಬ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಸಿಸಿಟಿವಿಯಿಂದ ಬಯಲಾದ ಕೃತ್ಯ : ಲಾಡ್ಜ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಚಟುವಟಿಕೆಗಳು ಬಹಿರಂಗವಾಗಿವೆ. ಬಳಿಕ ಪರಶುರಾಮ ಪೂಜೇರಿ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ದೀಪಾ ಅವಟಗಿಯನ್ನು ಬಂಧಿಸಿದೆ. ನ್ಯಾಯಾಲಯದ ಅನುಮತಿಯೊಂದಿಗೆ ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷಾಂತರ ಮೌಲ್ಯದ ವಸ್ತು ಜಪ್ತಿ : ಬಂಧಿತ ಆರೋಪಿಯಿಂದ ಪೊಲೀಸರು ಒಟ್ಟು ₹32 ಲಕ್ಷ 86 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ ಒಂದು Toyota Fortuner ಕಾರು, ಒಂದು Maruti Suzuki S-Cross ಕಾರು ಹಾಗೂ 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ ₹14 ಸಾವಿರ ನಗದು ಸೇರಿವೆ.
ಪರಾರಿಯಾದ ಸಹಚರನಿಗಾಗಿ ಹುಡುಕಾಟ: ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಾನಂದ ಮಠಪತಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಜಾಲಕ್ಕೆ ಇನ್ನೂ ಹಲವರು ಬಲಿಯಾಗಿರುವ ಸಾಧ್ಯತೆ ಇರುವುದರಿಂದ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.























