Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಯುವಕ ಇರಾನ್‌ನಲ್ಲಿ ನಾಪತ್ತೆ

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಯುವಕ ಇರಾನ್‌ನಲ್ಲಿ ನಾಪತ್ತೆ

0
10

ಚಿಕ್ಕಮಗಳೂರು: ಇರಾನ್‌ನಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯ ನಡುವೆ ಕೊಪ್ಪ ತಾಲೂಕಿನ ಯುವಕನೊಬ್ಬ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ. ಯುವಕನ ಸಂಪರ್ಕ ಸಿಗದೆ ಕುಟುಂಬಸ್ಥರ ಆತಂಕಕ್ಕೀಡಾಗಿದ್ದಾರೆ.

ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದ ನಿಶ್ಚಿತ್ ಎಂಬ ಯುವಕ ಮರ್ಚಂಟ್ ನೇವಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಕೇವಲ ಐದು ತಿಂಗಳ ಹಿಂದಷ್ಟೇ ಕೆಲಸದ ನಿಮಿತ್ತ ಇರಾನ್‌ಗೆ ತೆರಳಿದ್ದರು. ಆದರೆ ಪ್ರಸ್ತುತ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಯುದ್ಧ ವಾತಾವರಣ ತಾರಕಕ್ಕೇರಿದ್ದು, ಕ್ಷಿಪಣಿ ದಾಳಿಗಳ ನಡುವೆ ನಿಶ್ಚಿತ್ ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದಿರುವುದು ಕುಟುಂಬಸ್ಥರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಕಳೆದ ಕೆಲವು ದಿನಗಳಿಂದ ನಿಶ್ಚಿತ್ ಅವರ ಮೊಬೈಲ್ ಫೋನ್ ಸಂಪರ್ಕ ಕಡಿತಗೊಂಡಿರುವುದರಿಂದ ಯುದ್ಧ ಪೀಡಿತ ಪ್ರದೇಶದಲ್ಲಿ ಅವರ ಸ್ಥಿತಿ ಹೇಗಿದೆ ಎಂಬುದು ತಿಳಿಯದೆ ಕುಟುಂಬಸ್ಥರು ಕಳವಳಗೊಂಡಿದ್ದಾರೆ.

ಇದನ್ನೂ ಓದಿ: ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ: ಸುದೀರ್ಘ ತಪಾಸಣೆ

ಮಗನ ಕರೆಗಾಗಿ ದಿನವೂ ಕಾಯುತ್ತಿರುವ ಪೋಷಕರು ತೀವ್ರ ಆತಂಕದಲ್ಲಿದ್ದು, ಗ್ರಾಮದಲ್ಲೂ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಜಿಲ್ಲಾಡಳಿತ ಅಥವಾ ಸ್ಥಳೀಯ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲವೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹೀಗಾಗಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ವಿದೇಶಾಂಗ ಇಲಾಖೆಯ ಮೂಲಕ ನಿಶ್ಚಿತ್ ಅವರ ಪತ್ತೆಗೆ ಕ್ರಮ ಕೈಗೊಂಡು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕೆಂದು ಪೋಷಕರು ಕಣ್ಣೀರಿನ ಮನವಿ ಮಾಡಿದ್ದಾರೆ.