ಟಾಟಾ ಏರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ : ವರ್ಷಕ್ಕೆ 10 ಹೆಲಿಕಾಪ್ಟರ್ ಉತ್ಪಾದನೆ – ವೇಮಗಲ್ ಘಟಕದಿಂದ ಹೊಸ ಯುಗ
ಕೋಲಾರ: ಚಿನ್ನದ ನಾಡು ಕೋಲಾರ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟಾಟಾ–ಎರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ಇಂದು (ಫೆಬ್ರವರಿ 17) ಸಂಜೆ 4.20ಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಈ ಮಹತ್ವದ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರಾನ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ರಕ್ಷಣಾ ಸಚಿವೆ ಖುದ್ದು ವೇಮಗಲ್‌ಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಕೋಲಾರ: ಖಾಸಗಿ ಬಸ್ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ, 40ಕ್ಕೂ ಹೆಚ್ಚು ಮಂದಿಗೆ ಗಾಯ
ಈ ಹಿನ್ನೆಲೆಯಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ಎಂ.ಆರ್. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ವರ್ಷಕ್ಕೆ 10 ಹೆಲಿಕಾಪ್ಟರ್ ತಯಾರಿಕೆ ಸಾಮರ್ಥ್ಯ: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸುಮಾರು 16 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣಗೊಂಡಿದ್ದು, ಇದು ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಹಂತದಲ್ಲಿ ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ಮುಖ್ಯವಾಗಿ ರಕ್ಷಣಾ ಇಲಾಖೆಗೆ ಅಗತ್ಯವಿರುವ ಹೆಲಿಕಾಪ್ಟರ್‌ಗಳ ಉತ್ಪಾದನೆ ಇಲ್ಲಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಗಳನ್ನೂ ರೂಪಿಸಲಾಗಿದೆ.
ಇದನ್ನೂ ಓದಿ: ಕಾಳಿ ನದಿ ನೀರಾವರಿ ಯೋಜನೆ ಅಂತಿಮ ಹಂತ: ಹಳಿಯಾಳ ರೈತರಿಗೆ ಶೀಘ್ರ ನೀರು
ಸ್ಥಳ ಆಯ್ಕೆಗೆ ಪ್ರಮುಖ ಕಾರಣಗಳು: ವೇಮಗಲ್ ಕೈಗಾರಿಕಾ ಪ್ರದೇಶವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಮೀಪದಲ್ಲಿರುವುದು ಈ ಘಟಕ ಸ್ಥಾಪನೆಗೆ ಪ್ರಮುಖ ಕಾರಣವಾಗಿದೆ. ಉತ್ತಮ ರಸ್ತೆ, ವಿಮಾನ ಸಂಪರ್ಕ ಮತ್ತು ಕೈಗಾರಿಕಾ ಮೂಲಸೌಕರ್ಯ ಇರುವುದರಿಂದ ಇಲ್ಲಿ ಘಟಕ ಸ್ಥಾಪನೆಗೆ ಅನುಕೂಲವಾಗಿದೆ.
ಉದ್ಯೋಗ ಮತ್ತು ಅಭಿವೃದ್ಧಿಗೆ ಹೊಸ ಆಯಾಮ: ಈ ಘಟಕ ಆರಂಭದಿಂದ ಕೋಲಾರ ಜಿಲ್ಲೆಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಗೆ ಬಲ ಸಿಗಲಿದೆ. ಜೊತೆಗೆ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ ದೊರೆಯಲಿದೆ. ರಾಷ್ಟ್ರಮಟ್ಟದಲ್ಲಿ ಕೋಲಾರ ಜಿಲ್ಲೆಯನ್ನು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಗುರುತಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.























