Home Advertisement
Home ನಮ್ಮ ಜಿಲ್ಲೆ ಬಳ್ಳಾರಿ 5 ಸಾವಿರ ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ ಪತ್ತೆ

5 ಸಾವಿರ ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ ಪತ್ತೆ

0
233

ಸಂ.ಕ.ಸಮಾಚಾರ ತೆಕ್ಕಲಕೋಟೆ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಪ್ರಮುಖ ಪಟ್ಟಣ ಪಂಚಾಯತ್ ಪಟ್ಟಣದ ಪಶ್ಚಿಮ–ನೈರುತ್ಯ ಭಾಗದಲ್ಲಿರುವ ಗೌಡ್ರ ಮೂಲೆಯ ಬೆಟ್ಟಗುಡ್ಡ ಪ್ರದೇಶದಲ್ಲಿ ಸುಮಾರು 3,500ರಿಂದ 5,000 ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ, ಮಣ್ಣಿನ ಮಡಿಕೆಗಳು ಹಾಗೂ ಶಿಲಾಯುಧಗಳು ಪತ್ತೆಯಾಗಿದ್ದು, ಇದರಿಂದ ಪ್ರಾಚೀನ ನಾಗರಿಕತೆಯ ಅಧ್ಯಯನಕ್ಕೆ ಹೊಸ ಆಯಾಮ ಸಿಕ್ಕಿದೆ.

ಅಮೇರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ನಮಿತಾ ಎಸ್. ಸುಗಂಧಿ ಅವರ ನೇತೃತ್ವದಲ್ಲಿ ಕಳೆದ ತಿಂಗಳಿಂದ ಇಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ಮೂರು ತಂಡಗಳಾಗಿ ವಿಭಜನೆ ಮಾಡಿ ಸಂಶೋಧನೆ ನಡೆಸಲಾಗುತ್ತಿದೆ. ಹಿರೇ ಅರ್ಲ, ಬೂದಿ ದಿಬ್ಬ, ಬಾಳೆ ತೋಟ, ಜಕ್ಕೇರು ಗುಡ್ಡ ಹಾಗೂ ಹುಡೇದಗುಡ್ಡ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಉತ್ಖನನ ಕೈಗೊಳ್ಳಲಾಗಿದೆ.

ನವಶಿಲಾಯುಗದ ಕುರುಹುಗಳು ಪತ್ತೆ: ಉತ್ಖನನದ ವೇಳೆ ನವಶಿಲಾಯುಗದ ಜನರು ಬಳಸುತ್ತಿದ್ದ ಚೂಪಾದ ಕಲ್ಲಿನ ಆಯುಧಗಳು, ಕೈ ಕೊಡಲಿ, ಪ್ರಾಣಿಗಳ ಹಲ್ಲುಗಳು, ದಿನನಿತ್ಯ ಬಳಕೆಯ ವಸ್ತುಗಳು, ಒರಳು, ಗುಂಡು ಸೇರಿದಂತೆ ಹಲವು ಮಹತ್ವದ ಪುರಾತನ ವಸ್ತುಗಳು ಪತ್ತೆಯಾಗಿವೆ.

ತೆಕ್ಕಲಕೋಟೆಯ ಈ ಪ್ರದೇಶಗಳು ವಿಶೇಷತೆಯನ್ನು ಹೊಂದಿದ್ದು, ಒಂದೇ ಸ್ಥಳದಲ್ಲಿ ಶಿಲಾಯುಗ, ನವಶಿಲಾಯುಗ ಹಾಗೂ ಲೋಹಯುಗದ ಕುರುಹುಗಳು ಕಂಡುಬರುತ್ತಿವೆ. ಇದರಿಂದ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಮಾನವ ಜೀವನ, ಸಂಸ್ಕೃತಿ ಹಾಗೂ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅಮೂಲ್ಯ ಮಾಹಿತಿ ಲಭ್ಯವಾಗುತ್ತಿದೆ.

ವಿಶಿಷ್ಟ ಶವಸಂಸ್ಕಾರ ಪದ್ಧತಿ: ಉತ್ಖನನ ಸಂದರ್ಭದಲ್ಲಿ ಸುಮಾರು 5.5 ಅಡಿ ಉದ್ದದ ಮಾನವನ ಅಸ್ತಿಪಂಜರ ಪತ್ತೆಯಾಗಿದ್ದು, ಈ ಶವವನ್ನು ಕಲ್ಲುಗಳಿಂದ ಮುಚ್ಚುವ ಮೂಲಕ ಸಂಸ್ಕಾರ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಇದು ಆ ಕಾಲದ ವಿಶಿಷ್ಟ ಅಂತ್ಯಕ್ರಿಯಾ ಪದ್ಧತಿಯನ್ನು ಸೂಚಿಸುತ್ತದೆ.

ಇದೇ ವೇಳೆ ವಿವಿಧ ವಿನ್ಯಾಸ ಮತ್ತು ಗಾತ್ರದ ಮಡಿಕೆಗಳು, ಪ್ರಾಣಿಗಳ ಎಲುಬುಗಳು ಹಾಗೂ ಶಿಲಾಯುಧಗಳ ಅವಶೇಷಗಳು ಪತ್ತೆಯಾಗಿವೆ. 2 ರಿಂದ 2.5 ಅಡಿ ಎತ್ತರ ಹಾಗೂ ಒಂದು ಅಡಿ ವ್ಯಾಸದ ದೊಡ್ಡ ಗಡಿಗೆಗಳಲ್ಲೂ ಮೊಳೆಗಳು ಕಂಡುಬಂದಿದ್ದು, ಶವಸಂಸ್ಕಾರದಲ್ಲಿ ಇವುಗಳನ್ನು ಬಳಸಿರುವ ಸಾಧ್ಯತೆ ಇದೆ ಎಂದು ಡಾ. ನಮಿತಾ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ತಜ್ಞರ ಸಹಕಾರ: ಗ್ರೀಸ್ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞೆ ಸುಸೇನ್ ಕ್ರಿಕ್ ಪ್ಯಾಟ್ರಿಕ್ ಸ್ಮಿತ್ ಅವರು ಪಳಿಯುಳಿಕೆಗಳ ಸಂರಕ್ಷಣೆ, ಕಾಲಮಾನ ನಿರ್ಣಯ ಹಾಗೂ ಮಡಿಕೆಗಳ ಪುನರ್ ಸಂರಕ್ಷಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಸಂಶೋಧನಾ ತಂಡದಲ್ಲಿ ಐಐಟಿ ಕಾನ್ಪುರದ ಡಾ. ಯಶಸ್ವಿನಿ ಜಯದೇವಯ್ಯ, ಕಲಬುರಗಿ ಕೇಂದ್ರ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಜಿ. ರೋಹಿಣಿ ಹಾಗೂ ಅಶೋಕ ಅಬಕಾರಿ ಭಾಗವಹಿಸಿದ್ದಾರೆ.

ರಕ್ಷಣೆಗೆ ಕ್ರಮ ವಹಿಸಲು ಆಗ್ರಹ: ಈ ಪ್ರದೇಶದ ಮಹತ್ವದ ಬಗ್ಗೆ ಸ್ಥಳೀಯ ಉಪನ್ಯಾಸಕ ಮನೋಹರ ಬೇಸರ ವ್ಯಕ್ತಪಡಿಸಿದ್ದು, “ಇಂತಹ ಐತಿಹಾಸಿಕ ಸ್ಥಳಗಳ ರಕ್ಷಣೆಗಾಗಿ ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆ ಕ್ರಮ ವಹಿಸಿಲ್ಲ. ಸ್ಥಳದ ಮಹತ್ವ ತಿಳಿಸುವ ಫಲಕಗಳು ಇಲ್ಲ. ಬೂದಿ ದಿಬ್ಬಕ್ಕೆ ಹೋಗಲು ಸರಿಯಾದ ರಸ್ತೆ ಹಾಗೂ ಮಾರ್ಗಸೂಚಿಗಳಿಲ್ಲ. ಅಧ್ಯಯನಾಸಕ್ತರಿಗೆ ಇದರಿಂದ ತೊಂದರೆ ಆಗುತ್ತಿದೆ” ಎಂದು ಹೇಳಿದ್ದಾರೆ.

ಇತಿಹಾಸ ಅಧ್ಯಯನಕ್ಕೆ ಮಹತ್ವ: ತೆಕ್ಕಲಕೋಟೆಯ ಈ ಪ್ರಾಗೈತಿಹಾಸಿಕ ನೆಲೆಗಳು ದಕ್ಷಿಣ ಭಾರತದ ಪ್ರಾಚೀನ ನಾಗರಿಕತೆಯ ಅಧ್ಯಯನಕ್ಕೆ ಅತ್ಯಂತ ಮಹತ್ವ ಪಡೆದಿದ್ದು, ಭವಿಷ್ಯದಲ್ಲಿ ರಾಷ್ಟ್ರಮಟ್ಟದ ಪುರಾತತ್ವ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Previous articleಬೆಂಗಳೂರು–ವಿಜಯಪುರ ವಂದೇ ಭಾರತ್, ಹೈಸ್ಪೀಡ್ ಕಾರಿಡಾರ್‌ಗೆ ಎಂ.ಬಿ. ಪಾಟೀಲ್ ಮನವಿ
Next articleಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲು ಕಾರವಾರವರೆಗೆ