ವಿಧಾನ ಪರಿಷತ್: ಮಹಿಳೆಯರ ಬಗೆಗೆ ನಮ್ಮ ದೇಶದಲ್ಲಿ ಅಪಾರ ಗೌರವವಿದೆ. ಆದರೆ, ಚಿಂತಕರ ಚಾವಡಿ ಎಂಬ ಖ್ಯಾತಿ ಪಡೆದ ಮೇಲ್ಮನೆಯಲ್ಲಿ ಮಹಿಳೆಯರ ಬಗೆಗೆ ಅಗೌರವ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವುದು ನೋವಿನ ಸಂಗತಿ. ಇಲ್ಲಿ ನನಗೆ ನ್ಯಾಯ ಸಿಗುವುದಿಲ್ಲ ಎಂದು ಬೇಸರಗೊಂಡ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಸಭಾತ್ಯಾಗ ಮಾಡಿದರು.
ಊಟದ ವಿರಾಮದ ಬಳಿಕ ಸದನ ಪ್ರಾರಂಭವಾಗುತ್ತಿದ್ದಂತೆ, ಕಳೆದ ವಾರ ಕಾಂಗ್ರೆಸ್ ಶಾಸಕರು ಮಹಿಳೆಯರ ಬಗೆಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಕ್ರಮ ಕೈಗೊಳ್ಳುವಂತೆ ಪೀಠಕ್ಕೆ ಒತ್ತಾಯ ಮಾಡುತ್ತಲೇ ಬರಲಾಗುತ್ತಿತ್ತು. ಆದರೆ, ಈ ವರೆಗೆ ಯಾವುದೇ ಕ್ರಮ ಆಗಲಿಲ್ಲ.
ಇದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಈಗಾಗಲೇ ಬಿ.ಕೆ. ಹರಿಪ್ರಸಾದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಪೀಠದಿಂದ ರೂಲಿಂಗ್ ನೀಡಿ ವಿಷಯ ಮುಗಿಸಲಾಗಿದೆ. ಇನ್ನೂ ಏನಾಗಬೇಕು ಹೇಳಿ. ಕಡತ ಪರಿಶೀಲಿಸಿ ಕಾಯ್ದೆ ಪ್ರಕಾರ ನಡೆದುಕೊಳ್ಳಲಾಗುವುದು ಎಂದು ಸಮಾಧಾನಪಡಿಸಿದರು. ಆದರೆ, ಇದ್ಯಾವುದಕ್ಕೂ ನಿಲ್ಲದ ಭಾರತಿ ಶೆಟ್ಟಿ ಅವರು ಸಭೆಯಿಂದ ಹೊರನಡೆದ ಪ್ರಸಂಗ ಕಂಡುಬಂದಿತು.





















