Home Advertisement
Home ಸಿನಿ ಮಿಲ್ಸ್ ಚಿತ್ರರಂಗದ 3 ದಶಕಗಳ ಸಂಭ್ರಮದಲ್ಲಿ ಸುದೀಪ್ ಭಾವುಕ ಪತ್ರ

ಚಿತ್ರರಂಗದ 3 ದಶಕಗಳ ಸಂಭ್ರಮದಲ್ಲಿ ಸುದೀಪ್ ಭಾವುಕ ಪತ್ರ

0
7

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳನ್ನು ಪೂರೈಸಿರುವ ಸಂಭ್ರಮದ ಸಂದರ್ಭದಲ್ಲಿ ನಟ ಸುದೀಪ್ ತಮ್ಮ ಅಭಿಮಾನಿಗಳು, ಚಿತ್ರರಂಗದ ಸಹೋದ್ಯೋಗಿಗಳು ಹಾಗೂ ಮಾಧ್ಯಮದವರನ್ನು ಉದ್ದೇಶಿಸಿ ಭಾವುಕ ಕೃತಜ್ಞತಾ ಪತ್ರ ಬರೆದಿದ್ದಾರೆ. ‘ಮೂವತ್ತು ವರ್ಷಗಳ ಸಾರ್ಥಕ ಪಯಣ’ ಎಂಬ ಶೀರ್ಷಿಕೆಯಲ್ಲಿ ಆರಂಭವಾಗುವ ಈ ಪತ್ರದಲ್ಲಿ ತಮ್ಮ ವೃತ್ತಿ ಜೀವನದ ಏರುಪೇರು, ಬೆಂಬಲ ಮತ್ತು ಮಾನವೀಯತೆಯ ಮಹತ್ವವನ್ನು ಸುದೀಪ್ ಹೃದಯದಿಂದ ಹಂಚಿಕೊಂಡಿದ್ದಾರೆ.

“ಚಿತ್ರರಂಗದಲ್ಲಿ 3 ದಶಕಗಳನ್ನು ಪೂರೈಸಿ ನಿಂತಿರುವ ಈ ಕ್ಷಣದಲ್ಲಿ ನನ್ನ ಹೃದಯ ತುಂಬಿ ಬಂದಿದೆ. ಅಂದು ಕನಸುಗಳು, ಅನುಮಾನಗಳು ಮತ್ತು ಅಪಾರ ಭರವಸೆ ಹೊತ್ತಿದ್ದ ಒಬ್ಬ ಹುಡುಗ ನಾನು. ಅಂದಿನ ಸ್ಥಿತಿಗೂ, ಇಂದು ಬೆಳೆದಿರುವ ರೀತಿ ಊಹಿಸಿದ್ದಕ್ಕಿಂತ ದೊಡ್ಡದಾಗಿದೆ. ಇದಕ್ಕೆ ಕಾರಣ ನೀವು” ಎಂದು ಸುದೀಪ್ ತಮ್ಮ ಯಶಸ್ಸಿನ ಹಿಂದೆ ಇರುವ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಕಿಚ್ಚೋತ್ಸವಕ್ಕೆ ಅಭಿಮಾನಿಗಳು ಸಜ್ಜು

ವೃತ್ತಿ ಜೀವನದಲ್ಲಿ ತಮಗೆ ಸಾಥ್ ನೀಡಿದ ಪ್ರತಿಯೊಬ್ಬರ ಪಾತ್ರವನ್ನು ಸುದೀಪ್ ಸ್ಪಷ್ಟವಾಗಿ ನೆನಪಿಸಿಕೊಂಡಿದ್ದಾರೆ.

ಅಭಿಮಾನಿಗಳ ಬಗ್ಗೆ, “ನೀವೇ ನನ್ನ ಶಕ್ತಿ, ನೀವೇ ನನ್ನ ಪ್ರೇರಣೆ. ನಾನು ಪ್ರತಿದಿನ ಕೆಲಸಕ್ಕೆ ಬರಲು ನೀವೇ ಕಾರಣ” ಎಂದು ಅಭಿಮಾನಿಗಳ ಪ್ರೀತಿಯನ್ನು ಗೌರವಿಸಿದ್ದಾರೆ.

ನಿರ್ದೇಶಕರು ಮತ್ತು ಬರಹಗಾರರಿಗೆ, “ನಿಮ್ಮ ಕಥೆಗಳಿಗೆ ನಾನು ಸರಿಹೊಂದುತ್ತೇನೆ ಎಂದು ನಂಬಿ ಜವಾಬ್ದಾರಿ ನೀಡಿದ್ದಕ್ಕಾಗಿ, ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ಹಾಗೂ ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ

ನಿರ್ಮಾಪಕರಿಗೆ, “ನಿಮ್ಮ ಧೈರ್ಯ ಮತ್ತು ನಂಬಿಕೆ ನನ್ನ ಕನಸುಗಳನ್ನು ನನಸಾಗಿಸಿವೆ” ಎಂದು ಸುದೀಪ್ ಹೇಳಿದ್ದಾರೆ.

ಸಹ ಕಲಾವಿದರು ಮತ್ತು ತಂತ್ರಜ್ಞರನ್ನು ಉಲ್ಲೇಖಿಸುತ್ತಾ, ಸಿನಿಮಾ ಒಂದು ಸಂಘಟಿತ ಶ್ರಮ ಎಂದು ಹೇಳಿ, ಲೈಟ್ ಬಾಯ್‌ನಿಂದ ಹಿಡಿದು ಕ್ಯಾಮೆರಾಮನ್‌, ಕಲಾ ತಂಡ, ಕಾಸ್ಟ್ಯೂಮ್ ಡಿಸೈನರ್‌, ಸ್ಪಾಟ್ ಬಾಯ್ಸ್ ಹಾಗೂ ಎಡಿಟರ್‌ಗಳವರೆಗೆ ಎಲ್ಲರ ಪರಿಶ್ರಮವನ್ನೂ ಗೌರವಿಸಿದ್ದಾರೆ.

ಮಾಧ್ಯಮದ ಪಾತ್ರವನ್ನೂ ಸುದೀಪ್ ಮರೆಯದೆ, “ನೀವು ನನ್ನ ಧ್ವನಿಯನ್ನು ಜನರಿಗೆ ತಲುಪಿಸಿದ್ದೀರಿ. ನನ್ನನ್ನು ಪ್ರಶ್ನಿಸಿದ್ದೀರಿ, ನನ್ನ ಯಶಸ್ಸನ್ನು ಸಂಭ್ರಮಿಸಿದ್ದೀರಿ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದೀರಿ” ಎಂದು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಹಳ್ಳಿಯ ಗಾಳಿಯಂತೆ ಮನಸ್ಸಿಗೆ ಇಳಿಯುವ ‘ವಲವಾರ’ ವಿಮರ್ಶೆ

ಕನ್ನಡ ಚಿತ್ರರಂಗದ ಬಗ್ಗೆ ವಿಶೇಷವಾಗಿ ಮಾತನಾಡಿರುವ ಸುದೀಪ್, “ಕನ್ನಡ ಚಿತ್ರರಂಗ ನನಗೆ ಗುರುತು ಮತ್ತು ಹೆಮ್ಮೆ. ಚಿತ್ರರಂಗ ನನಗೆ ನೆಲೆ ನೀಡಿದೆ. ನಾನು ಸದಾ ಕನ್ನಡ ಚಿತ್ರವನ್ನು ನನ್ನ ಹೃದಯದಲ್ಲಿ ಹೊತ್ತು ನಡೆಯುತ್ತೇನೆ” ಎಂದು ಭಾವಪೂರ್ಣವಾಗಿ ಹೇಳಿದ್ದಾರೆ.

ತಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ, “ಈ ಎಲ್ಲ ಏರಿಳಿತಗಳ ನಡುವೆ ನನ್ನನ್ನು ಸಾಮಾನ್ಯ ಮನುಷ್ಯನಂತೆ ನೋಡಿದ್ದೀರಿ. ನಾನು ಹೇಗಿದ್ದೇನೋ ಹಾಗೆ ಸ್ವೀಕರಿಸಿದ್ದಕ್ಕೆ ಧನ್ಯವಾದ” ಎಂದು ಮನಸಾರೆ ಹೇಳಿದ್ದಾರೆ.

ಪತ್ರದ ಕೊನೆಯಲ್ಲಿ, “ಈ 30 ವರ್ಷಗಳು ನನಗೆ ಕಲಿಸಿದ ದೊಡ್ಡ ಪಾಠ ‘ಮಾನವೀಯತೆ’. ಪ್ರತಿಯೊಂದು ಗೆಲುವೂ ನಮಗೆ ದಕ್ಕಿದ ಪ್ರಸಾದ. ನಾನು ಇನ್ನೂ ಕಠಿಣವಾಗಿ ಶ್ರಮಿಸುತ್ತೇನೆ, ಕಲೆಯನ್ನು ಗೌರವಿಸುತ್ತೇನೆ ಮತ್ತು ಸಿನಿಮಾ ನನಗೆ ನೀಡಿದ್ದನ್ನು ಮರಳಿ ನೀಡುತ್ತೇನೆ” ಎಂದು ಭರವಸೆ ನೀಡುತ್ತಾ, ಕೈಮುಗಿದು ಕೃತಜ್ಞತಾ ಭಾವದೊಂದಿಗೆ ಪತ್ರವನ್ನು ಸುದೀಪ್ ಪೂರ್ಣಗೊಳಿಸಿದ್ದಾರೆ.

Previous articleಹಳ್ಳಿಯ ಗಾಳಿಯಂತೆ ಮನಸ್ಸಿಗೆ ಇಳಿಯುವ ‘ವಲವಾರ’ ವಿಮರ್ಶೆ
Next articleಉಳವಿ ಜಾತ್ರೆ: ಪೋಲಿಸ್ ಇಲಾಖೆಯ ವಿಶೇಷ ಬಂದೋಬಸ್ತ