ಚಿತ್ರ: ವಲವಾರ
ನಿರ್ದೇಶನ: ಸುತನ್ ಗೌಡ
ನಿರ್ಮಾಣ: ಮಾರ್ಫ್ ಪ್ರೊಡಕ್ಷನ್ಸ್
ತಾರಾಗಣ: ಮಾ. ವೇದಿಕ್ ಕುಶಾಲ್, ಮಾ. ಶಯನ್, ಮಾಲತೇಶ್ ಎಚ್.ವಿ, ಹರ್ಷಿತಾ ಗೌಡ, ಅಭಯ್ ಸೇರಿದಂತೆ ಇತರರು
ರೇಟಿಂಗ್: ⭐⭐⭐⭐ (3.5/5)
– ಗಣೇಶ್ ರಾಣೆಬೆನ್ನೂರು
ಸಿನಿಮಾ ಆರಂಭವಾದ ಕೆಲವೇ ನಿಮಿಷಗಳಲ್ಲಿ ‘ವಲವಾರ’ ಯಾವತ್ತೂ ಸಿದ್ಧ ಸೂತ್ರಗಳ ಹಾದಿ ಹಿಡಿಯುವ ಸಿನಿಮಾ ಅಲ್ಲ ಎಂಬುದು ಖಚಿತವಾಗುತ್ತದೆ. ಬಹುತೇಕ ಹಳ್ಳಿಯ ವಾತಾವರಣದಲ್ಲೇ ಚಿತ್ರಿತವಾಗಿರುವ ಈ ಸಿನಿಮಾ, ಅಲ್ಲಿನ ಸ್ವಚ್ಛಂದ ಪರಿಸರದಂತೆ ನಿಧಾನವಾಗಿ, ಗಾಳಿಯಂತೆ ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿದು ಒಂದು ಆಹ್ಲಾದಕರ ಅನುಭವವನ್ನು ನೀಡುತ್ತಾ ಸಾಗುತ್ತದೆ.
ಇಲ್ಲಿ ಅಣ್ಣ–ತಮ್ಮಂದಿರ ಕಥೆಯಿದೆ. ತೋಟದ ದಾಖಲೆಗಳನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕೆಂಬ ಹೋರಾಟವಿದೆ. ‘ಮಕ್ಕಳೆಂದರೆ ಎಲ್ಲರೂ ಒಂದೇ’ ಎನ್ನುವ ತಾಯಿಯ ಮಮತೆ ಇದೆ. ಈ ಎಲ್ಲದರ ನಡುವೆ ಹಸು ಮತ್ತು ಹುಂಜ ಕೂಡ ಕೇವಲ ಪ್ರಾಣಿಗಳಲ್ಲ, ಕಥೆಯ ಪ್ರಮುಖ ಪಾತ್ರಗಳೆಂಬಂತೆ ನಿರೂಪಣೆಯಾಗಿವೆ. ಹೀಗಾಗಿ ‘ವಲವಾರ’ನಲ್ಲಿ ನಗುವಿಗೂ ಬರವಿಲ್ಲ, ಭಾವನಾತ್ಮಕ ಕ್ಷಣಗಳಿಗೂ ಕೊರತೆಯಿಲ್ಲ. ಮನಸ್ಸನ್ನು ಹಿಂಡುವ, ಚಿಂತನೆಗೆ ದಾರಿ ಮಾಡಿಕೊಡುವ ಅನೇಕ ದೃಶ್ಯಗಳನ್ನು ನಿರ್ದೇಶಕ ಸುತನ್ ಗೌಡ ಸೂಕ್ಷ್ಮವಾಗಿ ಪೋಣಿಸಿದ್ದಾರೆ.
ಇದನ್ನೂ ಓದಿ: ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ
ಕುಂಡೇಸಿ (ಮಾ. ವೇದಿಕ್ ಕುಶಾಲ್) ಮತ್ತು ಕೊಸುಡಿ (ಮಾ. ಶಯನ್) ಅಣ್ಣ–ತಮ್ಮಂದಿರು. ಇವರ ನಡುವಿನ ಜಗಳ, ತುಂಟಾಟಗಳು ಪ್ರೇಕ್ಷಕರನ್ನು ತಮ್ಮದೇ ಬಾಲ್ಯದ ನೆನಪುಗಳಿಗೆ ಕರೆದುಕೊಂಡು ಹೋಗುತ್ತವೆ. ಇವರ ತಂದೆ (ಮಾಲತೇಶ್ ಎಚ್.ವಿ) ಬಡತನವನ್ನು ಬದುಕಿನ ಭಾಗವನ್ನಾಗಿಸಿಕೊಂಡ ವ್ಯಕ್ತಿ. ಅವನಿಗೆ ಚಿಕ್ಕ ಮಗನ ಮೇಲೆ ಅಪಾರ ಪ್ರೀತಿ, ಆದರೆ ದೊಡ್ಡ ಮಗ ಕುಂಡೇಸಿಯನ್ನು ಕಂಡರೆ ಅಷ್ಟೇನೂ ಒಲವಿಲ್ಲ. ತಾಯಿ (ಹರ್ಷಿತಾ ಗೌಡ) ಮಾತ್ರ ಇಬ್ಬರೂ ಮಕ್ಕಳು ತನ್ನ ಹೃದಯದ ತುಣುಕುಗಳೆಂದು ಭಾವಿಸುವ ಮಹಿಳೆ. ಗೌರಿ (ಹಸು) ಮತ್ತು ಜಡೇಜಾ (ಹುಂಜ) ಕೂಡ ಇವರ ಮನೆಯ ಅಪ್ರತ್ಯಕ್ಷ ಸದಸ್ಯರು ಎಂಬಂತೆ ಚಿತ್ರಣಗೊಂಡಿವೆ.
ಬಡತನವೇ ಹಾಸುಹೊಕ್ಕಾಗಿರುವ ಈ ಕುಟುಂಬದ ಬದುಕಿನಲ್ಲಿ ಒಂದು ದಿನ ಎಲ್ಲವನ್ನೂ ತಲೆಕೆಳಗಾಗಿಸುವ ಘಟನೆ ನಡೆಯುತ್ತದೆ. ಆ ಘಟನೆಯ ನಂತರ ಕಥೆ ಯಾವ ದಿಕ್ಕು ಹಿಡಿಯುತ್ತದೆ, ಸಂಬಂಧಗಳ ಮೇಲೆ ಅದರ ಪರಿಣಾಮವೇನು ಎಂಬುದೇ ಚಿತ್ರದ ಹೃದಯ. ಕಥೆಯ ಹರಿವು ಕೆಲವೊಮ್ಮೆ ಊಹಿಸಬಹುದಾದಂತಿದ್ದರೂ, ಅದರೊಳಗಿನ ಸಂದೇಶ ಮತ್ತು ನಿರೂಪಣೆಯ ಶೈಲಿ ಪ್ರೇಕ್ಷಕರನ್ನು ಹಿಡಿದುಕೊಳ್ಳುತ್ತದೆ.
ಇದನ್ನೂ ಓದಿ: ಹಯಗ್ರೀವನ ‘ಮೊದಲನೇ ಮಾತು’ ಮೊದಲ ಹಾಡಿಗೆ ಮುಹೂರ್ತ
ಕಲಾವಿದರೆಲ್ಲರೂ ತಮ್ಮ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಸಲ್ಲಿಸಿರುವುದರಿಂದ ‘ವಲವಾರ’ ಅತ್ಯಂತ ನೈಜವಾಗಿ ಮೂಡಿಬಂದಿದೆ. ಅತಿರೇಕವಿಲ್ಲದ ಅಭಿನಯ, ಸರಳ ಸಂಭಾಷಣೆ ಮತ್ತು ಹಳ್ಳಿಯ ಬದುಕಿನ ನೈಜ ಚಿತ್ರಣ ಚಿತ್ರದ ಶಕ್ತಿಯಾಗಿದೆ. ‘ಈಸಬೇಕು, ಇದ್ದು ಜಯಿಸಬೇಕು’ ಎಂಬ ಜೀವನ ತತ್ತ್ವವನ್ನು ರೂಪಕದ ಮೂಲಕ ಹೇಳುವ ಪ್ರಯತ್ನವಾಗಿ ‘ವಲವಾರ’ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ.























