Home Advertisement
Home ಸಿನಿ ಮಿಲ್ಸ್ ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ

ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ

0
5

ಚಿತ್ರ: ಚೌಕಿದಾರ್
ನಿರ್ದೇಶನ: ಚಂದ್ರಶೇಖರ ಬಂಡಿಯಪ್ಪ
ನಿರ್ಮಾಣ: ಕಲ್ಲಹಳ್ಳಿ ಚಂದ್ರಶೇಖರ್
ತಾರಾಗಣ: ಸಾಯಿಕುಮಾರ್, ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್, ಶ್ವೇತಾ, ಸುಧಾರಾಣಿ, ಧರ್ಮ, ಗಿಲ್ಲಿ ನಟ ಸೇರಿದಂತೆ ಇತರರು
ರೇಟಿಂಗ್: ⭐⭐⭐ (3/5)

– ಜಿ.ಆರ್.ಬಿ

ಗಂಡು ಮಗು ಹುಟ್ಟಿದ ಕ್ಷಣದಿಂದಲೇ ಆತನ ಭವಿಷ್ಯದ ಕನಸುಗಳನ್ನು ಹೆಣೆದುಕೊಳ್ಳುವ ತಂದೆ…
ತಾನು ಅನುಭವಿಸದ ಸವಲತ್ತುಗಳನ್ನು ಮಗನಿಗೆ ನೀಡಬೇಕೆಂಬ ಒಂದೇ ಗುರಿಗಾಗಿ ಬದುಕನ್ನು ತ್ಯಾಗಮಾಡುವ ಅಪ್ಪ…
ಇಂತಹ ತಂದೆಗೆ ಮಗ ಯಾವ ರೀತಿಯಲ್ಲಿ ಸ್ಪಂದಿಸುತ್ತಾನೆ? ತಂದೆಯ ತ್ಯಾಗಕ್ಕೆ ಮಗ ನ್ಯಾಯ ಸಲ್ಲಿಸುತ್ತಾನಾ? ಎಂಬ ಪ್ರಶ್ನೆಗಳನ್ನೇ ‘ಚೌಕಿದಾರ್’ ಸಿನಿಮಾ ತನ್ನ ಕಥೆಯ ಹೃದಯವನ್ನಾಗಿ ಇಟ್ಟುಕೊಂಡಿದೆ.

ಪ್ರಕಾಶ್ ಗೌಡ (ಸಾಯಿಕುಮಾರ್) ತನ್ನ ಏಕೈಕ ಮಗ ಸಿದ್ಧಾರ್ಥ (ಪೃಥ್ವಿ ಅಂಬಾರ್)ನಿಗಾಗಿ ಜೀವನವನ್ನೇ ಅರ್ಪಿಸಿದ ತಂದೆ. ಚಿಕ್ಕಂದಿನಿಂದಲೇ ಮಗನ ಖುಷಿಯೇ ಅವನ ಬದುಕಿನ ಕೇಂದ್ರಬಿಂದು. ಸೈಕಲ್‌ನಿಂದ ಹಿಡಿದು ಬೈಕ್‌ವರೆಗೆ, ಸ್ವಯಂ ರಕ್ಷಣೆಗೆ ಕರಾಟೆ ತರಬೇತಿವರೆಗೆ—ಎಲ್ಲವನ್ನೂ ತಂದೆಯೇ ಮುಂದಾಗಿ ಒದಗಿಸುತ್ತಾನೆ. ಈ ನಡುವೆ ಹೆಂಡತಿಗೆ ಪ್ರೀತಿ ಕಡಿಮೆಯಾದರೂ, ಮಗನಿಗೆ ಮಾತ್ರ ಎಂದಿಗೂ ಕಡಿಮೆಯಾಗಲು ಬಿಡುವುದಿಲ್ಲ.

ಇದನ್ನೂ ಓದಿ: ಹಯಗ್ರೀವನ ‘ಮೊದಲನೇ ಮಾತು’ ಮೊದಲ ಹಾಡಿಗೆ ಮುಹೂರ್ತ

ಆದರೆ ಸಿದ್ಧಾರ್ಥನ ಜೀವನದ ದಿಕ್ಕೇ ಬೇರೆ. ಮೋಜು–ಮಸ್ತಿಯಲ್ಲಿ ಕಾಲ ಕಳೆಯುವ ಆತ, ಪ್ರೀತಿ ವೈಫಲ್ಯದ ನೋವಿಗೆ ಧೂಮಪಾನ ಮತ್ತು ಮದ್ಯಪಾನಕ್ಕೆ ದಾಸನಾಗುತ್ತಾನೆ. ಅನಾಹುತಗಳ ಸರಣಿಯ ಬಳಿಕ ಅವನೊಳಗೆ ಜ್ಞಾನೋದಯವಾಗುವ ಹಂತ ಬರುತ್ತದೆ. ಅಲ್ಲಿವರೆಗೆ ಸರಳ ಹಾದಿಯಲ್ಲಿ ಸಾಗುವ ಕಥೆ, ಮಧ್ಯಂತರದಲ್ಲಿ ಒಂದಷ್ಟು ತಿರುವುಗಳನ್ನು ಪಡೆಯುತ್ತದೆ. ಮುಂದಿನ ಬೆಳವಣಿಗೆಗಳು ನಿರೀಕ್ಷಿತವಾಗಿದ್ದರೂ, ಭಾವನಾತ್ಮಕ ಅಂಶಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ‘ಚೌಕಿದಾರ್’ನನ್ನು ಅಕ್ಕಪಕ್ಕದ ಮನೆಯಲ್ಲೇ ನಡೆಯುವ ಕಥೆಯಂತೆ ಕಟ್ಟಿಕೊಟ್ಟಿದ್ದಾರೆ. ಕೌಟುಂಬಿಕ ಕಥನ, ತಂದೆಯ ಭಾವುಕತೆ, ಮಗನ ಬೇಜವಾಬ್ದಾರಿತನ, ಖಳನಾಯಕನ ಅಬ್ಬರ, ತಂಗಾಳಿಯಂತೆ ಕಾಣಿಸಿಕೊಳ್ಳುವ ನಾಯಕಿ—ಇವೆಲ್ಲವೂ ಸಿನಿಮಾದೊಳಗೆ ಸಮರ್ಪಕವಾಗಿ ಬೆರೆತಿವೆ.

ಇದನ್ನೂ ಓದಿ: ಬಂಗಾರಿ ಮೂಲಕ ಹೈಪ್ ಕ್ರಿಯೇಟ್ ಮಾಡಿದ ‘ಘಾರ್ಗಾ’ ಬುಲ್ ಬುಲ್

ನಟನೆಯ ವಿಚಾರಕ್ಕೆ ಬಂದರೆ, ಸಾಯಿಕುಮಾರ್ ಸಿನಿಮಾ ತುಂಬಾ ನಾಯಕನಂತೆಯೇ ಜೀವಿಸಿದ್ದಾರೆ. ತಂದೆಯ ಪಾತ್ರದಲ್ಲಿ ಅವರ ಅಭಿನಯ ಭಾರೀ ಭಾವುಕತೆ ತಂದೊಡ್ಡುತ್ತದೆ. ಪೃಥ್ವಿ ಅಂಬಾರ್ ಆ್ಯಕ್ಷನ್ ಮತ್ತು ಸೆಂಟಿಮೆಂಟ್ ದೃಶ್ಯಗಳಲ್ಲಿ ಫುಲ್ ಮಾರ್ಕ್ಸ್ ಗಳಿಸುತ್ತಾರೆ. ಧನ್ಯಾ ರಾಮ್‌ಕುಮಾರ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಶ್ವೇತಾ, ಸುಧಾರಾಣಿ, ಧರ್ಮ ಸೇರಿದಂತೆ ಇತರ ಕಲಾವಿದರ ನಟನೆ ಸಹ ಗಮನ ಸೆಳೆಯುತ್ತದೆ.

ಒಟ್ಟಾರೆ, ‘ಚೌಕಿದಾರ್’ ತಂದೆ–ಮಗನ ಸಂಬಂಧದ ಭಾವನಾತ್ಮಕ ಆಯಾಮವನ್ನು ಸರಳ ಕಥನದಲ್ಲಿ ಹೇಳುವ ಪ್ರಯತ್ನ. ಹೊಸತನ ಕಡಿಮೆಯಿದ್ದರೂ, ಸಂಬಂಧಗಳ ತೀವ್ರತೆಯನ್ನು ಇಷ್ಟಪಡುವ ಪ್ರೇಕ್ಷಕರಿಗೆ ಸಿನಿಮಾ ಮನಸೂರೆಗೊಳ್ಳುವ ಸಾಧ್ಯತೆ ಇದೆ.

Previous articleಬೀದರ್‌: ನಿಗೂಢ ವಸ್ತು ಸ್ಪೋಟ – ಮಕ್ಕಳು ಸೇರಿ 6 ಜನರಿಗೆ ಗಾಯ
Next articleತ್ರಿವಳಿ ಕೊಲೆ: ಮನೆಯ ಗುಂಡಿಯಲ್ಲಿ ತಂದೆ–ತಾಯಿ–ತಂಗಿಯ ಶವ ಪತ್ತೆ