ಧನ್ವೀರ್–ಸಂಜನಾ ಆನಂದ್ ನಟನೆಯ ‘ಹಯಗ್ರೀವ’: ಜನವರಿ 31ಕ್ಕೆ ಮೊದಲ ಹಾಡು ಚಾಮರಾಜನಗದಲ್ಲಿ ಶನಿವಾರ ಸಂಜೆ ಅನಾವರಣ
ಬೆಂಗಳೂರು: ಬಜಾರ್ ಖ್ಯಾತಿಯ ಧನ್ವೀರ್ ಹಾಗೂ ‘ಬ್ಯಾಂಗಲ್ ಬಂಗಾರಿ’ ಖ್ಯಾತಿಯ ಸಂಜನಾ ಆನಂದ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಹಯಗ್ರೀವ’ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲು ಚಿತ್ರತಂಡ ಮುಂದಾಗಿದ್ದು, ಮೊದಲ ಹಾಡಿನ ಬಿಡುಗಡೆಗೆ ಅಧಿಕೃತ ಮುಹೂರ್ತ ನಿಗದಿಪಡಿಸಲಾಗಿದೆ.
ಚಿತ್ರದ ಮೊದಲನೇ ಹಾಡು ‘ಮೊದಲನೇ ಮಾತು’ ಶನಿವಾರ (ಜನವರಿ 31) ಸಂಜೆ ಬಿಡುಗಡೆಯಾಗಲಿದೆ. ಚಾಮರಾಜನಗರದ ಶ್ರೀ ಭ್ರಮರಾಂಭ ಸಿನಿಪ್ಲೆಕ್ಸ್‌ನಲ್ಲಿ ಸಂಜೆ 5 ಗಂಟೆಗೆ ಈ ಹಾಡನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ರಿಲೀಸ್ ಆಗಲಿದೆ.
ಇದನ್ನೂ ಓದಿ: ಬಂಗಾರಿ ಮೂಲಕ ಹೈಪ್ ಕ್ರಿಯೇಟ್ ಮಾಡಿದ ‘ಘಾರ್ಗಾ’ ಬುಲ್ ಬುಲ್
ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಚಿತ್ ಹೆಗ್ಡೆ ಮತ್ತು ಲಹರಿ ಮಹೇಶ್ ಈ ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ರೊಮ್ಯಾಂಟಿಕ್ ಥೀಮ್ ಹೊಂದಿರುವ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ನೀಡಿದ್ದಾರೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಹಯಗ್ರೀವ’ ಸಿನಿಮಾಕ್ಕೆ ರಘುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪದ್ಮಾ ಸಮೃದ್ಧಿ ಮಂಜುನಾಥ್ ಬಂಡವಾಳ ಹೂಡಿದ್ದಾರೆ. ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಈ ಚಿತ್ರಕ್ಕೆ ಮಹೇಶ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ: ‘ರಕ್ಕಸಪುರದೋಳ್’ ಟ್ರೇಲರ್‌ಗೆ ಕಿಚ್ಚ, ಪ್ರೇಮ್ ಸಾಥ್
ಚಿತ್ರದ ತಾರಾಗಣದಲ್ಲಿ ಸಾಧುಕೋಕಿಲ, ಶರತ್ ಲೋಹಿತಾಶ್ವ, ರಮೇಶ್ ಭಟ್, ಅಶ್ವಿನಿ ಗೌಡ, ಶೋಭರಾಜ್, ಸಂಗೀತಾ, ಕೃಷ್ಣ ಹೆಬ್ಬಾಳೆ, ಅಶ್ವಿನ್ ಹಾಸನ್ ಹಾಗೂ ಗಿಲ್ಲಿ ನಟ ಸೇರಿದಂತೆ ಅನೇಕ ಹಿರಿಯ ಹಾಗೂ ಯುವ ಕಲಾವಿದರು ಇದ್ದಾರೆ.
ಚಿತ್ರಕ್ಕೆ ಗಿರೀಶ್ ಆರ್. ಗೌಡ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಸಾಹಸ ದೃಶ್ಯಗಳಿಗೆ ಡಾ. ಕೆ. ರವಿವರ್ಮ, ಡಿಫರೆಂಟ್ ಡ್ಯಾನಿ ಮತ್ತು ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ. ಶೈಲೇಶ್ ಕುಮಾರ್ ಹಾಗೂ ಚೇತನ್ ಸಿದ್ ಚಿತ್ರದ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ಡೈಲಾಗ್ ರೈಟರ್ ಪ್ರಶಾಂತ್ ರಾಜಪ್ಪ ನಿರ್ದೇಶನಕ್ಕೆ ಪದಾರ್ಪಣೆ
ಮೊದಲ ಹಾಡಿನ ಬಿಡುಗಡೆ ಮೂಲಕ ‘ಹಯಗ್ರೀವ’ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದ್ದು, ಫೆಬ್ರವರಿ 27ರಂದು ಪ್ರೇಕ್ಷಕರ ಮುಂದೆ ಯಾವ ರೀತಿಯ ಅನುಭವ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.























