Home Advertisement
Home ನಮ್ಮ ಜಿಲ್ಲೆ ವಿಜಯನಗರ ಹೊಸಪೇಟೆ: ಚಿರತೆ ದಾಳಿಯಿಂದ ಒಂದೇ ರಾತ್ರಿ 36 ಕುರಿಮರಿಗಳು ಬಲಿ

ಹೊಸಪೇಟೆ: ಚಿರತೆ ದಾಳಿಯಿಂದ ಒಂದೇ ರಾತ್ರಿ 36 ಕುರಿಮರಿಗಳು ಬಲಿ

0
8

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗಲಾಪುರ ತಾಂಡದ ಸಮೀಪ ಚಿರತೆ ದಾಳಿಗೆ 36 ಕುರಿಮರಿಗಳು ಮೃತಪಟ್ಟಿರುವ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೂಡ್ಲಿಗಿ ತಾಲೂಕಿನ ಗೊಲ್ಲರಹಟ್ಟಿಯ ಗರಗಮಲ್ಲಪ್ಪನವರಿಗೆ ಸೇರಿದ ಕುರಿಮರಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಅಂದಾಜು ₹3 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ.

ನಾಗಲಾಪುರ ತಾಂಡದ ಬಳಿಯ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಚಿರತೆ ಹಿಂಡಿನ ಮೇಲೆ ದಾಳಿ ಮಾಡಿದೆ. ಘಟನೆಯ ದಿನ ಸಮೀಪದ ಬ್ಯಾಲಕುಂದಿ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದ ಕಾರಣ ಕುರಿಗಾಹಿ ಪುರುಷರು ಜಾತ್ರೆಗೆ ತೆರಳಿದ್ದರು. ಕುರಿ ಮೇಯಿಸುವ ಕೆಲಸವನ್ನು ಮಹಿಳೆಯರು ನೋಡಿಕೊಳ್ಳುತ್ತಿದ್ದು, ಏಕಾಏಕಿ ಚಿರತೆ ದಾಳಿ ನಡೆಸಿದಾಗ ಜೀವಭಯದಿಂದ ಅವರು ಕುರಿಮರಿಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:  ಅಧಿವೇಶನದ ನಡುವೆ ಪ್ರಧಾನಿ – ಮಾಜಿ ಪ್ರಧಾನಿ ಮಹತ್ವದ ಭೇಟಿ

ಚಿರತೆ ದಾಳಿಯಿಂದ ಒಂದೇ ರಾತ್ರಿಯಲ್ಲಿ 36 ಕುರಿಮರಿಗಳು ಸಾವನ್ನಪ್ಪಿದ್ದು, ಇದರಿಂದ ಕುಟುಂಬಕ್ಕೆ ಭಾರೀ ಆರ್ಥಿಕ ಹೊಡೆತ ಬಿದ್ದಿದೆ. ಕುರಿ ಸಾಕಾಣಿಕೆಯನ್ನು ಜೀವನೋಪಾಯವಾಗಿಸಿಕೊಂಡಿರುವ ರೈತರು ಮತ್ತು ಕುರಿಗಾಹಿಗಳು ಈ ಘಟನೆ ಬಳಿಕ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಗೊಲ್ಲರಹಳ್ಳಿ, ದೇವಲಾಪುರ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚಿರತೆಗಳ ಓಡಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ವಿಶೇಷವಾಗಿ ಸಂಜೆ ಮತ್ತು ಮುಂಜಾನೆ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಹೊಲಕ್ಕೆ ಹೋಗಲು ಹಾಗೂ ಜಾನುವಾರುಗಳನ್ನು ಮೇಯಿಸಲು ಜನರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:  ರಾಜೀನಾಮೆ ಕುರಿತು ಸದನದಲ್ಲಿ ಕೆ.ಜೆ. ಜಾರ್ಜ್‌ ಸ್ಪಷ್ಟನೆ

ಈ ಬಗ್ಗೆ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಚಿರತೆ ಸೆರೆ ಹಿಡಿಯುವ ಕ್ರಮ ಕೈಗೊಳ್ಳಬೇಕು, ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಬೇಕು ಹಾಗೂ ನಷ್ಟಕ್ಕೊಳಗಾದ ಕುರಿಗಾಹಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Previous articleWPL : ನೇರವಾಗಿ ಫೈನಲ್ ಪ್ರವೇಶಿಸಿದ RCB
Next articleಮಾಜಿ ಒಲಿಂಪಿಯನ್ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ನಿಧನ